Monday, July 27, 2020

ಜಾನವಿ

10ನೇ ತರಗತಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿ ಆಗತಾನೆ ಪದವಿ ಪೂರ್ವ ಕಾಲೇಜಿಗೆ ಪ್ರವೇಶ ಪಡೆದ ಜಾನವಿ ಮುಜುಗರ ಪಟ್ಟುಕೊಳ್ಳುವ ಸ್ವಭಾವದವಳು. ಅವಳ ಕಪ್ಪು ಬಣ್ಣ ಮತ್ತು ಕುಟುಂಬದ ಬಡತನ ಅವಳ ಇಂತಹ ಆಲೋಚನೆಗೆ ಕಾರಣವಾಗಿತ್ತು. ಕಾಲೇಜಿನಲ್ಲಿಯೂ ಎಲ್ಲರೊಂದಿಗೆ ಬೆರೆತು ನಡೆದುಕೊಳ್ಳದ ಅವಳು ಕೊನೆಯ ಬೆಂಚಿನಲ್ಲಿ ಕುಳಿತುಕೊಳ್ಳುವ ರೂಢಿ ಮಾಡಿಕೊಂಡಿದ್ದಳು.


ಇನ್ನುಳಿದ ವಿದ್ಯಾರ್ಥಿನಿಯರು ಕಾಲೇಜಿಗೆ ಸ್ಕೂಟಿ, ಕಾರಿನಲ್ಲಿ ಬರುವುದನ್ನು ಮುಗ್ಗದತೆಯಿಂದ ಕಾಣುವ ಅವಳು ಕುಟುಂಬದ ಬಡತನ, ತಂದೆ-ತಾಯಿಯ ಅವಿರತ ಪರಿಶ್ರಮ ಸೇರಿದಂತೆ ಇನ್ನಿತರ ಕಾರಣಗಳಿಂದ ತನ್ನ ಮನದ ಆಸೆ, ಆಕಾಂಕ್ಷೆಗಳು ಕೂಡ ದಬಾಯಿಸುವ ರೂಢಿ ಬೆಳೆಸಿಕೊಂಡಿದ್ದಳು.

ಪ್ರತಿ ವರ್ಷದಂತೆ ಶೈಕ್ಷಣಿಕ ವರ್ಷದ ತರಗತಿಗಳು ಪ್ರಾರಂಭವಾದವು. ಯಾವತ್ತು ಕೂಡ ಕಾಲೇಜಿಗೆ ತಪ್ಪಿಸಿಕೊಂಡವಳಲ್ಲ ಜಾನವಿ. ಒಂದು ದಿನ ಕಾಲೇಜಿಗೆ ಹೋಗಬೇಕು ಎಂದು ಸಿದ್ದವಾಗುತ್ತಿದ್ದಂತೆಯೇ ಜೋರಾಗಿ ಮಳೆ ಪ್ರಾರಂಭವಾಗಿ ಕಾಲೇಜು ಹೋಗದೆ ಮನೆಯಲ್ಲಿಯೇ ಉಳಿದಳು.

ಮರುದಿನ ಕಾಲೇಜಿಗೆ ಹೋಗುತ್ತಿದ್ದಂತೆ ತನ್ನ ತರಗತಿ ಕೋಣೆಯಲ್ಲಿರುವ ಇನ್ನಿತರ ವಿದ್ಯಾರ್ಥಿನಿಯರ ಹತ್ತಿರ ಹಿಂದಿನ ದಿನದ ನೋಟ್ಸ್ ನೀಡುವಂತೆ ಮನವಿ ಮಾಡಿಕೊಂಡಾಗ ಅವಳ ಡ್ರೇಸಿಂಗ್, ಹಳ್ಳಿ ಜೀವನದ ಸರಳತೆ, ಫ್ಯಾಶನ್ ಜಮಾನದಿಂದ ತೀರ ದೂರ ಉಳಿದ ಆಕೆಯ ಮುಗ್ದತೆಯಿಂದ ಯಾರೊಬ್ಬರು ಕೂಡ ಅವಳಿಗೆ ನೋಟ್ಸ್ ನೀಡಲು ಮುಂದೆ ಬರಲಿಲ್ಲ.

ಅಷ್ಟಕ್ಕೂ ಜಾನವಿ ತಲೆ ಕೆಡಿಸಿಕೊಳ್ಳದೇ ತನಗೆ ಅನುಕೂಲವಾದಂತೆ ಹಿಂದಿನ ದಿನದ ನೋಟ್ಸ್ ಸಿದ್ಧಪಡಿಸಿಕೊಂಡು ಓದಿನಲ್ಲಿ ತೊಡಗಿದಳು. ತರಗತಿಗಳು ಪ್ರಾರಂಭವಾಗಿ ಸುಮಾರು ಒಂದುವರೆ ತಿಂಗಳು ಕಳೆದಿತ್ತು. ಅಷ್ಟೋತ್ತಿಗೆ ಇತಿಹಾಸ ಬೋಧಿಸುವ ಉಪನ್ಯಾಸಕರು ಒಂದು ಘಟಕ ಪರೀಕ್ಷೆಗಾಗಿ ಸಿದ್ಧರಾಗುವಂತೆ ತರಗತಿ ವಿದ್ಯಾರ್ಥಿಗಳಿಗೆ ಸೂಚಿಸಿದರು.

ಜಾನವಿಗೆ ಮೊದಲಿನಿಂದಲೇ ಓದಿನಲ್ಲಿ ಎಲ್ಲಿಲ್ಲದ ಉತ್ಸಾಹ ಮತ್ತು ಉಲ್ಲಾಸ. ಕಾಲೇಜಿಗೆ ಮೋಜು ಮಸ್ತಿ ಮಾಡಲು ಬರುವಂತಹ ಇನ್ನಿತರ ವಿದ್ಯಾರ್ಥಿಗಳಂತೆ ಜಾನವಿ ಯಾವತ್ತೂ ಕೂಡ ಕಾಲೇಜಿನಿಂದ ಅನಗತ್ಯವಾಗಿ ಹೊರ ಹೋದವಳಲ್ಲ. ಅಲ್ಲದೇ ಕಾಲೇಜಿನ ಯಾವ ವಿಷಯಗಳ ತರಗತಿಗೂ ಕೂಡ ಅವಳು ತಪ್ಪಿಸಿಕೊಂಡವಳಲ್ಲ.

ಅಂದು ಬುಧವಾರ, ತರಗತಿ ಕೋಣೆಯಲ್ಲಿ ಸುಮಾರು 100 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಎಲ್ಲರೂ ಘಟಕ ಪರೀಕ್ಷೆಯ ಕುರಿತು ಗುಸುಗುಸು ಮಾತನಾಡಿಕೊಳ್ಳುವಲ್ಲಿ ತಲ್ಲಿನ. ಆದರೇ ಜಾನವಿ ಮಾತ್ರ ತಾನು ದಿನ ಕುಳಿತುಕೊಳ್ಳುವ ಕೊನೆಯ ಬೆಂಚಿನಲ್ಲಿ ಕುಳಿತುಕೊಂಡು ಓದಿನಲ್ಲಿ ಮಗ್ನಳಾಗಿದ್ದಳು.

ಇತಿಹಾಸ ಬೋಧನೆಯ ಉಪನ್ಯಾಸಕರು ತರಗತಿ ಕೋಣೆ ಪ್ರವೇಶಿಸಿ, ಮುಂಚೆಯೇ ಹೇಳಿದಂತೆ ಪರೀಕ್ಷೆಗಾಗಿ ತನ್ನಲ್ಲಿಯ ಪ್ರಶ್ನೆ ಪತ್ರಿಕೆಗಳು ಒಂದೊಂದೆ ವಿದ್ಯಾರ್ಥಿಗೆ ನೀಡುತ್ತ ಸಾಗಿದರು. ಎಲ್ಲರ ಮುಖದಲ್ಲಿ ನಿರುತ್ಸಾಹ, ನಿರಾಸೆಯ ಭಾವ. ಆದರೇ ಜಾನವಿ ಮಾತ್ರ ಖುಷಿಯಿಂದ ಪ್ರಶ್ನೆ ಪತ್ರಿಕೆ ಪಡೆದು ಉತ್ತರಿಸಲು ತವಕದಲ್ಲಿರುವಂತೆ ಕಾಣುತ್ತಿತ್ತು.

ಸಪ್ಪೆ ಮುಖದಿಂದಲೇ ಎಲ್ಲರೂ ಪರೀಕ್ಷೆ ಬರೆದು ಬೇಗನೇ ಉತ್ತರಪತ್ರಿಕೆ ನೀಡಿದರು. ಆದರೇ ಜಾನವಿ ಮಾತ್ರ ನಿಗದಿತ ಅವಧಿಯ ಕೊನೆಯ ಕ್ಷಣದವರೆಗೂ ತನ್ನ ಉತ್ತರ ಪತ್ರಿಕೆ ಬರೆಯುವುದನ್ನು ನೋಡಿ ತಗರತಿಯ ಇನ್ನುಳಿದ ಹುಡುಗಿಯರು ಅವಳ ಕುರಿತು ಆಡಿಕೊಳ್ಳುತ್ತಿದರು.

ಪರೀಕ್ಷೆ ಮುಗಿಯಿತು ಎಲ್ಲರಿಗೂ ತಾನು ಪಡೆದ ಅಂಕಗಳ ವಿವರ ಪಡೆಯಬೇಕೆಂಬ ಕುತೂಹಲ. ಪ್ರತಿಯೊಬ್ಬರು ಇತಿಹಾಸ ಬೋಧನೆಯ ಉಪನ್ಯಾಸಕರಿಗೆ ಪ್ರತಿದಿನ ಪರೀಕ್ಷೆಯ ಕುರಿತು ಕೇಳುವುದೇ ಕೇಳುವುದು. ಅಂದು ಶನಿವಾರ. ಪರೀಕ್ಷೆಯ ಎಲ್ಲರ ಉತ್ತರಪತ್ರಿಕೆಗಳು ಹಿಡಿದುಕೊಂಡು ಬರುತ್ತಿದ್ದಂತೆ ಎಲ್ಲರ ಮನದಲ್ಲಿ ಭಯ, ದುಗುಡ ಆವರಿಸಿಕೊಂಡಿತ್ತು.

ತರಗತಿ ವಿದ್ಯಾರ್ಥಿಗಳು ಪಡೆದ ಅಂಕಗಳು ಹೇಳುತ್ತ ನಡೆದರು. ಮುಂದುವರೆದು ಜಾನವಿ ಸಂಖ್ಯೆಗಳು ಹೇಳುತ್ತಿದ್ದಂತೆ ಇಡಿ ತರಗತಿ ಕೋಣೆಯೇ ಆಶ್ಚರ್ಯ ಮತ್ತು ನಿಶ್ಯಬ್ದವಾಯಿತು. ಆಕೇ ಪಡೆದ ಅಂಕ 25ಕ್ಕೆ 25 ಅಂದರೇ ಯಾವ ಪ್ರಶ್ನೆಗಳು ಕೂಡ ಬಿಟ್ಟಿರದೇ ಪ್ರತಿಯೊಂದು ಬರೆದು ಪಡೆದಿರುವ ಅಂಕಗಳವು.


ಕೊನೆಯ ಬೆಂಚಿನಲ್ಲಿ ಕುಳಿತುಕೊಳ್ಳುವ ಜಾನವಿಗೆ ಉಪನ್ಯಾಸಕರು ಕರೆದು ಮುಂದಿನ ಬೆಂಚಿನಲ್ಲಿ ಕುಳಿತುಕೊಳ್ಳುವಂತೆ ಸೂಚಿಸಿದರು. ಅಷ್ಟೇ ಅಲ್ಲದೇ ತರಗತಿಯ ಎಲ್ಲ ವಿದ್ಯಾರ್ಥಿಗಳಿಗೆ ಚಪ್ಪಾಳೆ ಹೊಡೆಯುವಂತೆ ತಿಳಿಸಿದರು. ಜಾನವಿಗೆ ಒಂದೆಡೆ ಖುಷಿ ಮತ್ತೊಂದೆಡೆ ಭೀತಿ.


ಸಹಜವಾಗಿ ಅವಳ ಮನದ ತುಮುಲವನ್ನು ಕಂಡ ಉಪನ್ಯಾಸಕರು ಅವಳನ್ನು ಪ್ರತ್ಯೇಕವಾಗಿ ಕರೆದು ಧೈರ್ಯ ತುಂಬಿದ್ದರು. ಅವಳ ಅಂತರಾಳದಲ್ಲಿರುವ ಆಲೋಚನೆಗಳಿಗೆ ತಲುಪಿ ಕುಟುಂಬದ ಬಡತನ ಮತ್ತು ರೂಪ ಸೌಂದರ್ಯ ಯಾವತ್ತು ಜ್ಞಾನಕ್ಕೆ ಅಡ್ಡಿಯಾಗದು ಮಗಳೇ, ಜ್ಞಾನ ಎಂಬುದು ಇದೆಲ್ಲವನ್ನೂ ಮೀರಿ ಪಡೆಯುವುದಾಗಿದೆ. ನೀನು ನಿರಂತರ ಶ್ರಮವಹಿಸಿ ಸಾಧನೆಗೈಯುವಂತೆ ತಿಳಿಸಿ ಇಡೀ ತರಗತಿ ಕೋಣೆಯಲ್ಲಿ ಅವಳ ಸಾಧನೆಯನ್ನು ಇನ್ನಿತರರಿಗೆ ಸ್ಫೂರ್ತಿಯಾಗುವಂತೆ ಮೆಚ್ಚಿ ಹೊಗಳಿದರು.

ಒಬ್ಬ ಗುರುವಿನಲ್ಲಿ ಇರಬೇಕಾದ ಮಕ್ಕಳ ಕಾಳಜಿ ಏನೆಂಬುದನ್ನು ಇಲ್ಲಿ ಉಪನ್ಯಾಸಕರು ಮಾಡಿದರು. ಅಲ್ಲದೇ ಬೇರೆ ಮಕ್ಕಳಿಗೂ ಸಾಧನೆ ಪ್ರೇರಣೆಯಾಗಲಿ ಎನ್ನುವಂತೆ ತಿಳಿಹೇಳಿದರು. ಜಾನವಿಯಂತೆ ನಮ್ಮ ಮನಸ್ಸಿನಲ್ಲಿಯೂ ಕೂಡ ಅನೇಕ ದುಗುಡಗಳು ಮನೆ ಮಾಡಿರುತ್ತವೆ. ಆದರೇ ನಿಜಕ್ಕೂ ನಮ್ಮ ಸಾಧನೆಗೆ ಜಾತಿ, ಧರ್ಮ, ರೂಪ ಸೌಂದರ್ಯ, ಕುಟುಂಬದ ಬಡತನ ಎಂದಿಗೂ ಅಡ್ಡಿಯಾಗುವುದಿಲ್ಲ ಎಂಬುದನ್ನು ಅರಿತು ನಡೆಯಬೇಕಿದೆ ಎಂಬುದೇ ಈ ಲೇಖನದ ಮೂಲ ಆಶಯ.

-      - ಬಿಎಂ ಅಮರವಾಡಿ

 


1 comment:

Thank you for Visiting.

ಅಂಧಂತಮಸು ಇನ್ನಾರಿಗೆ : ಕನಕದಾಸರ ಕೀರ್ತನೆ ವಿಶ್ಲೇಷಣೆ

  ಅಂಧಂತಮಸು ಇನ್ನಾರಿಗೆ ಅಂಧಂತಮಸು ಇನ್ನಾರಿಗೆ ಗೋ - ವಿಂದನ ನಿಂದಿಸುವರಿಗೆ ಸಂದೇಹವಿಲ್ಲದೆ ಸಾರಿಸಾರಿಗೆ ವಾಯುನಂದನನ ವಂದಿಸದವರಿಗೆ ಮಾತುಮಾತಿಗೆ ಹರಿಯ ನ...