Monday, May 13, 2024

ಅಂಧಂತಮಸು ಇನ್ನಾರಿಗೆ : ಕನಕದಾಸರ ಕೀರ್ತನೆ ವಿಶ್ಲೇಷಣೆ

 

ಅಂಧಂತಮಸು ಇನ್ನಾರಿಗೆ

ಅಂಧಂತಮಸು ಇನ್ನಾರಿಗೆ ಗೋ-ವಿಂದನ ನಿಂದಿಸುವರಿಗೆ
ಸಂದೇಹವಿಲ್ಲದೆ ಸಾರಿಸಾರಿಗೆ ವಾಯುನಂದನನ ವಂದಿಸದವರಿಗೆ

ಮಾತುಮಾತಿಗೆ ಹರಿಯ ನಿಂದಿಸಿ  -ರ್ವೋತ್ತಮ ಶಿವನೆಂದು ವಾದಿಸಿ
ಧಾತು ಗ್ರಂಥಗಳೆಲ್ಲ ತೋರಿಸಿ  ವೇ-ದಾಂತ ಪ್ರಮಾಣಗಳ ಹಾರಿಸಿ
ಸೋತು ಸಂಕಟಪಟ್ಟು  ಘಾತಕ ಒಡಲೊಳಗಿಟ್ಟು ನೀತಿ ಹೇಳುವ ಕೆಟ್ಟ ಜಾತಿಗಳಿಗಲ್ಲದೆ

ಮೂಲಕವತಾರಕ್ಕೆ ಭೇದವುಮುಖ್ಯಶೀಲ ಪಂಡಿತರೊಳಗೆ ವಿವಾದವು
ಲೀಲಾ ಸಾದೃಶ್ಯವ ತೋರುತ - ಲಿಂಗಭಂಗವಿಲ್ಲದ ದೇಹ ಹಾರುತ
ಮೂಲ ಗುರುವು ಕುಂತೀಬಾಲನೆನ್ನದೆ ವೃಥಾಶೀಲಗೆಟ್ಟಂಥ ಖೂಳರಿಗಲ್ಲದೆ ಮತ್ತೆ

ವ್ಯಾಸರ ಮಾತುಗಳಾಡುತ ವಿ-ಶ್ವಾಸ ಘಾತಕತನ ಮಾಡುತ
ದೋಷವೆಂದರೆ ನುಡಿ ಕೇಳದೆ ಸಂ-ತೋಷವೆಂದರೆ ನೋಡಿ ಬಾಳದೆ
ಶೇಷಶಯನನಾದಿಕೇಶವರಾಯನದಾಸರೊಡೆಯ ಮಧ್ವದ್ವೇಷಿಗಳಿಗಲ್ಲದೆ

ಅಂಧಕಾರ ಮತ್ತು ಅಜ್ಞಾನವೆಂಬುದು ಯಾರೆಲ್ಲರಿಗೆ ಆವರಿಸಿಕೊಂಡಿದೆ ಕತ್ತಲ ಲೋಕ ಸೇರುವವರು ಯಾರು ಎಂಬ ವಿಚಾರಗಳನ್ನು ದಾರ್ಶನಿಕ ಕವಿ ಕನಕದಾಸರು ಶತಮಾನಗಳ ಹಿಂದೆಯೇ ಹೇಳಿದ್ದರು. ಆದರೆ ಪ್ರಸ್ತುತ ಕಾಲಕ್ಕೂ ಸಹ ಅನ್ವಯಿಸುವಂತಹ ಎಚ್ಚರಿಕೆಯ ಮಾತುಗಳು ನಮಗೆ ನಿಜಕ್ಕೂ ಅಚ್ಛರಿ ಮೂಡಿಸಬಲ್ಲದು. 

ಕನಕರು ಅತ್ಯಂತ ಸರಳವಾಗಿಯೇ ಅಜ್ಞಾನಿಗಳನ್ನು ಬಯಲಿಗೆಳೆದಿರುವುದು ಇಲ್ಲಿ ಕಾಣಬಹುದು. ದೇವನೊಬ್ಬ ನಾಮ ಹಲವು ಎಂದು ಘಂಟಾಘೋಷವಾಗಿ ವಾದಿಸುತ್ತಲೆ ಹರಿಯನ್ನು ನಿಂದಿಸಿ ಹರನೇ ಸರ್ವೋತ್ತಮನೆಂದು, ಆರಾಧಿಸುವ ದೇವರಲ್ಲಿಯೂ ಭೇದವ ಕಾಣುವರು. ಇದು ಪ್ರಸ್ತುತ ಸಂದರ್ಭಕ್ಕೆ ಸಮಾಜದ ಜನಗಳು ಆಚರಿಸುವ ಧರ್ಮದ ವಿಚಾರದಿಂದ ಕಂಡರೆ ಸೂಕ್ತ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ.

ಧರ್ಮವೆಂಬುದು ಮಹಾತ್ಮ ಬುದ್ಧ ಬಲು ಸೊಗಸಾಗಿ ವ್ಯಾಖ್ಯಾನಿಸಿದ್ದುಪವಿತ್ರ ಮನಸ್ಸಿನಿಂದ ಮಾಡುವ ಪ್ರತಿ ಕೆಲಸವು ಧರ್ಮ ಎಂದಿದ್ದಾನೆ. ಆದರೆ ಇಂದು ಧರ್ಮವು ಆಫೀಮಿನಂತೆ ಎಲ್ಲರಲ್ಲಿಯೂ ಒಂದು ರೀತಿಯ ನಶೆಗೆ ಅವಕಾಶ ಕಲ್ಪಿಸಿ, ಜಗಳಕ್ಕೆ ನಾಂದಿಯಾಗುವ ಅನಗತ್ಯ ವಿಷಯಗಳನ್ನು ಪ್ರಸ್ತಾಪಿಸಿ ಸಮಾನತೆಯ ಮಾತನಾಡುತ್ತಲೇ ಮನಸ್ಸಿನಲ್ಲಿನ ವಂಚನೆ, ಮೋಸ ಇದೆಲ್ಲವೂ ತೊರೆಯದೇ ಸಾಂಕೇತಿಕ ಆಚರಣೆಗಳಿಂದಲಿ ಶ್ರೇಷ್ಠ ಕನಿಷ್ಠವನ್ನು ಒಡಲಾಳದಲ್ಲಿಟ್ಟು ಬದುಕುತ್ತಿರುವ ಜನರಿಂದ ಅಂಧಕಾರ ತೊಲಗಿಸಲು ಸಾಧ್ಯವೇ?  

ಒಂದೆಡೆ ದೇವರು ಎಲ್ಲಿ ಬೇಕಾದರೂ ಕಾಣಬಹುದು ನಿಸರ್ಗದ ಅಣು ಅಣುವಿನಲ್ಲಿ ಕಣ ಕಣದಲ್ಲಿಯೂ ದೇವರು ನೆಲೆಸಿರುತ್ತಾನೆಂದು ಹೇಳುವ ಬುದ್ದಿವಂತರು ನಿರಾಕಾರ, ನಿರ್ಗುಣ ದೇವನಲ್ಲಿಯೇ ಭೇದ ಕಾಣುತ್ತ ಬದುಕುತ್ತಾರೆ. ಪ್ರಪಂಚದಾದ್ಯಂ ನಾವೇ ಪರಮ ಜ್ಞಾನಿಗಳೆಂದು ಹೇಳಿಕೊಂಡು ಸುಂದರವಾದ, ಸುಖಮಯವಾದ ಸಮಾಜದಲ್ಲಿ ವಿಷಬೀಜ ಬಿತ್ತುತ್ತ ವಿವಾದಗಳುಂಟು ಮಾಡಿ, ಮನುಷ್ಯ ಧರಿಸುವ ಬಾಹ್ಯ ಚಿಹ್ನೆಗಳಿಂದಲೇ ವ್ಯಕ್ತಿತ್ವ ಅಳೆಯುವ ಪ್ರಯತ್ನ ಮಾಡುತ್ತಾರೆ. ಪ್ರಪಂಚದಲ್ಲಿ ಮೂಲಗುರು ಯಾರೆಂದು ತಿಳಿಯಲು ಪ್ರಯತ್ನಿಸದೆ ಒಳ್ಳೆಯ ನಡತೆಯನ್ನು ಮರೆತು ದುಷ್ಟರಂತೆ ನಡೆದುಕೊಳ್ಳುತ್ತಾರೆ. ಹಿತಮಾತುಗಳಾಡುತ್ತಲೇ ಸ್ವಾರ್ಥದಿಂದ ಎದುರಿನವರಿಗೆ ವಿಶ್ವಾಸಘಾತ ಮಾಡುವ ದ್ರೋಹಿಗಳಿಗೆ, ದೋಷ ಸರಿಪಡಿಸಿಕೊಳ್ಳದ ಸಂತೋಷವನ್ನು ನೋಡಿ ಕಲಿಯದ ತತ್ವದ ದ್ವೇಷಿಗಳಿಗೆ ಅಂಧಕಾರ ಅಜ್ಞಾನ ಆವರಿಸಿದೆ ಎಂಬ ವಿಚಾರವನ್ನು ಕನಕದಾಸರು ಈ ಕೀರ್ತನೆಯಲ್ಲಿ ತಿಳಿಸಿದ್ದಾರೆ.

-          ಬಿ.ಎಂ ಅಮರವಾಡಿ.

No comments:

Post a Comment

Thank you for Visiting.

ಅಂಧಂತಮಸು ಇನ್ನಾರಿಗೆ : ಕನಕದಾಸರ ಕೀರ್ತನೆ ವಿಶ್ಲೇಷಣೆ

  ಅಂಧಂತಮಸು ಇನ್ನಾರಿಗೆ ಅಂಧಂತಮಸು ಇನ್ನಾರಿಗೆ ಗೋ - ವಿಂದನ ನಿಂದಿಸುವರಿಗೆ ಸಂದೇಹವಿಲ್ಲದೆ ಸಾರಿಸಾರಿಗೆ ವಾಯುನಂದನನ ವಂದಿಸದವರಿಗೆ ಮಾತುಮಾತಿಗೆ ಹರಿಯ ನ...