Thursday, June 17, 2021

ಅಂಧಂತಮಸು ಇನ್ನಾರಿಗೆ : ಕನಕದಾಸರ ಕೀರ್ತನೆ ವಿಶ್ಲೇಷಣೆ

 

ಅಂಧಂತಮಸು ಇನ್ನಾರಿಗೆ

ಅಂಧಂತಮಸು ಇನ್ನಾರಿಗೆ ಗೋ-ವಿಂದನ ನಿಂದಿಸುವರಿಗೆ
ಸಂದೇಹವಿಲ್ಲದೆ ಸಾರಿಸಾರಿಗೆ ವಾಯುನಂದನನ ವಂದಿಸದವರಿಗೆ

ಮಾತುಮಾತಿಗೆ ಹರಿಯ ನಿಂದಿಸಿ  -ರ್ವೋತ್ತಮ ಶಿವನೆಂದು ವಾದಿಸಿ
ಧಾತು ಗ್ರಂಥಗಳೆಲ್ಲ ತೋರಿಸಿ  ವೇ-ದಾಂತ ಪ್ರಮಾಣಗಳ ಹಾರಿಸಿ
ಸೋತು ಸಂಕಟಪಟ್ಟು  ಘಾತಕ ಒಡಲೊಳಗಿಟ್ಟು ನೀತಿ ಹೇಳುವ ಕೆಟ್ಟ ಜಾತಿಗಳಿಗಲ್ಲದೆ

ಮೂಲಕವತಾರಕ್ಕೆ ಭೇದವುಮುಖ್ಯಶೀಲ ಪಂಡಿತರೊಳಗೆ ವಿವಾದವು
ಲೀಲಾ ಸಾದೃಶ್ಯವ ತೋರುತ - ಲಿಂಗಭಂಗವಿಲ್ಲದ ದೇಹ ಹಾರುತ
ಮೂಲ ಗುರುವು ಕುಂತೀಬಾಲನೆನ್ನದೆ ವೃಥಾಶೀಲಗೆಟ್ಟಂಥ ಖೂಳರಿಗಲ್ಲದೆ ಮತ್ತೆ

ವ್ಯಾಸರ ಮಾತುಗಳಾಡುತ ವಿ-ಶ್ವಾಸ ಘಾತಕತನ ಮಾಡುತ
ದೋಷವೆಂದರೆ ನುಡಿ ಕೇಳದೆ ಸಂ-ತೋಷವೆಂದರೆ ನೋಡಿ ಬಾಳದೆ
ಶೇಷಶಯನನಾದಿಕೇಶವರಾಯನದಾಸರೊಡೆಯ ಮಧ್ವದ್ವೇಷಿಗಳಿಗಲ್ಲದೆ

ಅಂಧಕಾರ ಮತ್ತು ಅಜ್ಞಾನವೆಂಬುದು ಯಾರೆಲ್ಲರಿಗೆ ಆವರಿಸಿಕೊಂಡಿದೆ ಕತ್ತಲ ಲೋಕ ಸೇರುವವರು ಯಾರು ಎಂಬ ವಿಚಾರಗಳನ್ನು ದಾರ್ಶನಿಕ ಕವಿ ಕನಕದಾಸರು ಶತಮಾನಗಳ ಹಿಂದೆಯೇ ಹೇಳಿದ್ದರು. ಆದರೆ ಪ್ರಸ್ತುತ ಕಾಲಕ್ಕೂ ಸಹ ಅನ್ವಯಿಸುವಂತಹ ಎಚ್ಚರಿಕೆಯ ಮಾತುಗಳು ನಮಗೆ ನಿಜಕ್ಕೂ ಅಚ್ಛರಿ ಮೂಡಿಸಬಲ್ಲದು. 

ಕನಕರು ಅತ್ಯಂತ ಸರಳವಾಗಿಯೇ ಅಜ್ಞಾನಿಗಳನ್ನು ಬಯಲಿಗೆಳೆದಿರುವುದು ಇಲ್ಲಿ ಕಾಣಬಹುದು. ದೇವನೊಬ್ಬ ನಾಮ ಹಲವು ಎಂದು ಘಂಟಾಘೋಷವಾಗಿ ವಾದಿಸುತ್ತಲೆ ಹರಿಯನ್ನು ನಿಂದಿಸಿ ಹರನೇ ಸರ್ವೋತ್ತಮನೆಂದು, ಆರಾಧಿಸುವ ದೇವರಲ್ಲಿಯೂ ಭೇದವ ಕಾಣುವರು. ಇದು ಪ್ರಸ್ತುತ ಸಂದರ್ಭಕ್ಕೆ ಸಮಾಜದ ಜನಗಳು ಆಚರಿಸುವ ಧರ್ಮದ ವಿಚಾರದಿಂದ ಕಂಡರೆ ಸೂಕ್ತ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ.

ಧರ್ಮವೆಂಬುದು ಮಹಾತ್ಮ ಬುದ್ಧ ಬಲು ಸೊಗಸಾಗಿ ವ್ಯಾಖ್ಯಾನಿಸಿದ್ದುಪವಿತ್ರ ಮನಸ್ಸಿನಿಂದ ಮಾಡುವ ಪ್ರತಿ ಕೆಲಸವು ಧರ್ಮ ಎಂದಿದ್ದಾನೆ. ಆದರೆ ಇಂದು ಧರ್ಮವು ಆಫೀಮಿನಂತೆ ಎಲ್ಲರಲ್ಲಿಯೂ ಒಂದು ರೀತಿಯ ನಶೆಗೆ ಅವಕಾಶ ಕಲ್ಪಿಸಿ, ಜಗಳಕ್ಕೆ ನಾಂದಿಯಾಗುವ ಅನಗತ್ಯ ವಿಷಯಗಳನ್ನು ಪ್ರಸ್ತಾಪಿಸಿ ಸಮಾನತೆಯ ಮಾತನಾಡುತ್ತಲೇ ಮನಸ್ಸಿನಲ್ಲಿನ ವಂಚನೆ, ಮೋಸ ಇದೆಲ್ಲವೂ ತೊರೆಯದೇ ಸಾಂಕೇತಿಕ ಆಚರಣೆಗಳಿಂದಲಿ ಶ್ರೇಷ್ಠ ಕನಿಷ್ಠವನ್ನು ಒಡಲಾಳದಲ್ಲಿಟ್ಟು ಬದುಕುತ್ತಿರುವ ಜನರಿಂದ ಅಂಧಕಾರ ತೊಲಗಿಸಲು ಸಾಧ್ಯವೇ?  

ಒಂದೆಡೆ ದೇವರು ಎಲ್ಲಿ ಬೇಕಾದರೂ ಕಾಣಬಹುದು ನಿಸರ್ಗದ ಅಣು ಅಣುವಿನಲ್ಲಿ ಕಣ ಕಣದಲ್ಲಿಯೂ ದೇವರು ನೆಲೆಸಿರುತ್ತಾನೆಂದು ಹೇಳುವ ಬುದ್ದಿವಂತರು ನಿರಾಕಾರ, ನಿರ್ಗುಣ ದೇವನಲ್ಲಿಯೇ ಭೇದ ಕಾಣುತ್ತ ಬದುಕುತ್ತಾರೆ. ಪ್ರಪಂಚದಾದ್ಯಂ ನಾವೇ ಪರಮ ಜ್ಞಾನಿಗಳೆಂದು ಹೇಳಿಕೊಂಡು ಸುಂದರವಾದ, ಸುಖಮಯವಾದ ಸಮಾಜದಲ್ಲಿ ವಿಷಬೀಜ ಬಿತ್ತುತ್ತ ವಿವಾದಗಳುಂಟು ಮಾಡಿ, ಮನುಷ್ಯ ಧರಿಸುವ ಬಾಹ್ಯ ಚಿಹ್ನೆಗಳಿಂದಲೇ ವ್ಯಕ್ತಿತ್ವ ಅಳೆಯುವ ಪ್ರಯತ್ನ ಮಾಡುತ್ತಾರೆ. ಪ್ರಪಂಚದಲ್ಲಿ ಮೂಲಗುರು ಯಾರೆಂದು ತಿಳಿಯಲು ಪ್ರಯತ್ನಿಸದೆ ಒಳ್ಳೆಯ ನಡತೆಯನ್ನು ಮರೆತು ದುಷ್ಟರಂತೆ ನಡೆದುಕೊಳ್ಳುತ್ತಾರೆ. ಹಿತಮಾತುಗಳಾಡುತ್ತಲೇ ಸ್ವಾರ್ಥದಿಂದ ಎದುರಿನವರಿಗೆ ವಿಶ್ವಾಸಘಾತ ಮಾಡುವ ದ್ರೋಹಿಗಳಿಗೆ, ದೋಷ ಸರಿಪಡಿಸಿಕೊಳ್ಳದ ಸಂತೋಷವನ್ನು ನೋಡಿ ಕಲಿಯದ ತತ್ವದ ದ್ವೇಷಿಗಳಿಗೆ ಅಂಧಕಾರ ಅಜ್ಞಾನ ಆವರಿಸಿದೆ ಎಂಬ ವಿಚಾರವನ್ನು ಕನಕದಾಸರು ಈ ಕೀರ್ತನೆಯಲ್ಲಿ ತಿಳಿಸಿದ್ದಾರೆ.

-          ಬಿ.ಎಂ ಅಮರವಾಡಿ.

Tuesday, June 15, 2021

ಕಲಿಸದೆ ಪರೀಕ್ಷೆ ಮಾಡುವುದು ನೀಚತನ - ಡಾ. ಪಿ.ವಿ ನಿರಂಜನಾರಾಧ್ಯ

ಕಲಿಸದೆ ಪರೀಕ್ಷೆ ಮಾಡುವುದು ನೀಚತನ: 
ಡಾ.ವಿ.ಪಿ. ನಿರಂಜನಾರಾಧ್ಯ

ಶಾಲೆ ಕೇವಲ ಕಲಿಕೆಗೆ ಜಾಗವಾಗಿರಲಿಲ್ಲ. ಬಿಸಿ ಊಟ, ರೋಗ ನಿರೋಧಕ ಮಾತ್ರೆ ನೀಡುತ್ತಾ ಮಕ್ಕಳನ್ನು ಮಾನಸಿಕವಾಗಿ ಸದೃಢಗೊಳಿಸಿ ಮನೆಯಾಗಿ ಶಾಲೆ ಮಕ್ಕಳಿಗೆ ಬಿಂಬಿತವಾಗಿತ್ತು. ಅವೆಲ್ಲವನ್ನೂ ವಂಚಿಸಿರುವ ಪರಿಣಾಮ ಇಂದು ೯ರಿಂದ ೧೦ ಲಕ್ಷ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ.

ಈ ಎಲ್ಲ ಅನಾಹುತಗಳಿಗೆ ಸರಕಾರವೇ ಹೊಣೆಯಾಗಬೇಕಾಗುತ್ತದೆ.
- ಡಾ.ವಿ.ಪಿ. ನಿರಂಜನಾರಾಧ್ಯ, 
ಖ್ಯಾತ ಶಿಕ್ಷಣ ತಜ್ಞ

ಕೊರೋನ ಸಂದರ್ಭದಲ್ಲಿ ಕಳೆದೊಂದು ವರ್ಷದಿಂದ ಶಾಲೆಗಳು ಆರಂಭವಾಗದ ಕಾರಣ ಮಕ್ಕಳ ಭವಿಷ್ಯದ ಬಗ್ಗೆ ಪೋಷಕರು ಆತಂಕಕ್ಕೊಳಗಾಗಿದ್ದಾರೆ. ಈ ನಡುವೆ ಆನ್‌ಲೈನ್ ತರಗತಿ, ಶುಲ್ಕ ಪಾವತಿಸಲು ಖಾಸಗಿ ಶಿಕ್ಷಣ ಸಂಸ್ಥೆಗಳ ಒತ್ತಡ ಸೇರಿ ಅನೇಕ ಸಮಸ್ಯೆಗಳನ್ನು ಶಿಕ್ಷಕ ವೃಂದ, ಪೋಷಕ ವರ್ಗ, ವಿದ್ಯಾರ್ಥಿ ಸಮೂಹ ಎದುರಿಸುತ್ತಿದೆ. ಈಗ ಮತ್ತೆ ಶೈಕ್ಷಣಿಕ ವರ್ಷ ಆರಂಭವಾಗುತ್ತಿದೆ. ಮಕ್ಕಳ ಶೈಕ್ಷಣಿಕ ವರ್ಷದ ಗೊಂದಲದಲ್ಲಿ ಹೇಗೆ ಶುಲ್ಕ ಪಾವತಿಸುವುದು ಎಂದು ಪೋಷಕರು ಪ್ರಶ್ನಿಸುತ್ತಿದ್ದಾರೆ. ಪರೀಕ್ಷೆಗಳನ್ನು ನಡೆಸುವ ಬಗ್ಗೆ ಶಿಕ್ಷಣ ಸಚಿವರು ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ಶಿಕ್ಷಣ ಕ್ಷೇತ್ರದ ಅನೇಕ ಪ್ರಶ್ನೆಗಳು, ಗೊಂದಲಗಳ ಕುರಿತು ಖ್ಯಾತ ಶಿಕ್ಷಣ ತಜ್ಞ, ನ್ಯಾಶನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ ಸಮಾನ ಗುಣಮಟ್ಟದ ಶಾಲಾ ಶಿಕ್ಷಣ ಸಾರ್ವತ್ರೀಕರಣ ಕಾರ್ಯಕ್ರಮದ ಸೀನಿಯರ್ ಫೆಲೋ ಹಾಗೂ ಮುಖ್ಯಸ್ಥ ಡಾ.ವಿ.ಪಿ. ನಿರಂಜನಾರಾಧ್ಯ ಅವರೊಂದಿಗೆ ‘ವಾರ್ತಾಭಾರತಿ’ ಯುಟ್ಯೂಬ್ ಚಾನೆಲ್‌ಗಾಗಿ ಮಂಜುಳಾ ಮಾಸ್ತಿಕಟ್ಟೆ ನಡೆಸಿದ ವಿಶೇಷ ಸಂದರ್ಶನ ಇಲ್ಲಿದೆ.

► ವಾ.ಭಾ.: ಶಾಲೆಯಿಂದ ಹೊರಗುಳಿದ ಮಕ್ಕಳ ಭವಿಷ್ಯದ ಗತಿಯೇನು?

ನಿ: ಕಳೆದೆರಡು ವರ್ಷಗಳಲ್ಲಿ ಮಕ್ಕಳನ್ನು ಶಾಲೆಗೆ ಕರೆ ತರಲು, ಬಾಲ್ಯ ವಿವಾಹ, ಬಾಲಕಾರ್ಮಿಕರು, ಮಕ್ಕಳ ಕಳ್ಳ ಸಾಗಣೆ ತಡೆಗೆ ನಾವು ಮಾಡಿದ ಎಲ್ಲ ಪ್ರಯತ್ನಗಳು ಈಗ ಮಣ್ಣುಪಾಲಾಗಿವೆ.

 ಗ್ರಾಮೀಣ ತಳಮಟ್ಟದ ಸಂಶೋಧನೆ ಪ್ರಕಾರ ನಿರಂತರವಾಗಿ ೧೫ ತಿಂಗಳು ಶಾಲೆ ಮುಚ್ಚಿದ ಕಾರಣ ಸಾವಿರಾರು ಮಕ್ಕಳು ಬಾಲಕಾರ್ಮಿಕರಾಗಿದ್ದಾರೆ. ನೂರಾರು ಬಾಲ್ಯ ವಿವಾಹಗಳು ನಡೆದಿವೆ. ಮಕ್ಕಳ ಭಿಕ್ಷಾಟನೆ, ಮಕ್ಕಳ ಕಳ್ಳ ಸಾಗಾಣೆ ದೊಡ್ಡ ಪ್ರಮಾಣದಲ್ಲಿ ನಡೆದಿದೆ. ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಗಳು ನಡೆಯುತ್ತಿದ್ದು, ಇವೆಲ್ಲವೂ ದೊಡ್ಡ ಮಟ್ಟದಲ್ಲಿ ಮಕ್ಕಳನ್ನು ಶಾಲೆಯಿಂದ ದೂರ ಮಾಡಿವೆ. ಅದಕ್ಕಿಂತ ಹೆಚ್ಚಾಗಿ ಮಕ್ಕಳು ಸಂಪೂರ್ಣವಾಗಿ ಕಲಿಕೆಯನ್ನು ಮರೆತಿರುವುದರಿಂದ ಕಲಿಕೆಯ ನಷ್ಟ ಉಂಟಾಗಿದೆ. ಇದರಿಂದಲೇ ಭಾಷೆ, ಗಣಿತ, ಸಾಮರ್ಥ್ಯವನ್ನು ಮಕ್ಕಳು ಮರೆಯುವುದೇ ಅವರು ಶಾಲೆ ತೊರೆಯಲು ದೊಡ್ಡ ಕಾರಣ ಎಂದು ಅನೇಕ ಸಂಶೋಧನೆಗಳು ತಿಳಿಸಿವೆ. ಅದಕ್ಕೆ ಶಿಕ್ಷಣ ಇಲಾಖೆ ವಿಶೇಷ ಕಾಳಜಿಯಿಂದ ಎಲ್ಲ ಮಕ್ಕಳನ್ನು ಶಾಲೆಗೆ ತರಲು ಕ್ರಮವಹಿಸಬೇಕು. ವಿವಿಧ ಬಗೆಯ ಯೋಜನೆಗಳ ಮೂಲಕ ಮಕ್ಕಳ ಕಲಿಕೆ ನಿರಂತರವಾಗಿ ನಡೆಯಲು ಕ್ರಮ ಅಗತ್ಯವಾಗಿದೆ. ಇದು ಸರಕಾರಕ್ಕಿರುವ ಬಹುದೊಡ್ಡ ಸವಾಲಾಗಿದೆ.

► ವಾ.ಭಾ.: ಸದ್ಯದ ಶೈಕ್ಷಣಿಕ ಗೊಂದಲದ ಬಗ್ಗೆ ತಮ್ಮ ಅಭಿಪ್ರಾಯವೇನು?

 ನಿ: ರಾಜ್ಯದಲ್ಲಿ ಶಿಕ್ಷಣ ವಲಯವೇ ಗೊಂದಲದ ಗೂಡಾಗಿದೆ. ಪಾಲಕರು ಮತ್ತು ಮಕ್ಕಳು ಆತಂಕಕ್ಕೊಳಗಾಗಿದ್ದಾರೆ. ಅವರಲ್ಲಿ ಮನೋಸ್ಥೈರ್ಯ ತುಂಬುವ, ಅವರ ಸಮಸ್ಯೆಗಳಿಗೆ ಸ್ಪಂದಿಸುವ ಯಾವುದೇ ಕೆಲಸವಾಗದ ಕಾರಣ ಇಡೀ ಶಿಕ್ಷಣ ಕ್ಷೇತ್ರ ಬಿಕ್ಕಟ್ಟಿನತ್ತ ಸಾಗುತ್ತಿದೆ.

► ವಾ.ಭಾ.: ಪಿಯು ಪರೀಕ್ಷೆ ರದ್ದುಗೊಳಿಸಿ, ಎಸೆಸೆಲ್ಸಿ ಪರೀಕ್ಷೆ ನಡೆಸುವುದಾಗಿ ಎಲ್ಲರನ್ನು ಉತ್ತೀರ್ಣ ಮಾಡು ವುದಾಗಿ ಸಚಿವರು ಹೇಳುತ್ತಿದ್ದಾರೆ. ಆದರೆ ತೊಂದರೆ ತೆಗೆದುಕೊಂಡು ಪರೀಕ್ಷೆ ನಡೆಸುವುದಾದರೂ ಏಕೆ?

 ನಿ: ಇದು ಹಾಸ್ಯಾಸ್ಪದವಾಗಿದೆ. ಇಡೀ ದೇಶದಲ್ಲಿ ಸಿಬಿಎಸ್‌ಇ, ಐಸಿಎಸ್‌ಇ ಪಠ್ಯಕ್ರಮದಡಿಯ ೧೦ನೇ ತರಗತಿ ಮಕ್ಕಳ ಪರೀಕ್ಷೆ ರದ್ದು ಮಾಡಿ ಅವರನ್ನು ಕೆಲವು ಮಾನದಂಡಗಳೊಂದಿಗೆ ತೇರ್ಗಡೆ ಮಾಡುತ್ತಿರುವಾಗ ನಮ್ಮ ರಾಜ್ಯದಲ್ಲಿ ಪರೀಕ್ಷೆ ನಡೆಸಲು ತೀರ್ಮಾನಿಸಿರುವುದು ಹಾಸ್ಯಾಸ್ಪದ ಮತ್ತು ಸಂವಿಧಾನಾತ್ಮಕವಾಗಿ ಸರಿಯಿಲ್ಲ. ಸಂವಿಧಾನದ ಪರಿಚ್ಛೇದ ೧೫ ಯಾವುದೇ ಬಗೆಯ ತಾರತಮ್ಯ ಇರಬಾರದೆಂದು ಹೇಳುತ್ತದೆ. ಆದರೆ ಶಿಕ್ಷಣ ಇಲಾಖೆ ತಾರತಮ್ಯ ಎಸಗುತ್ತಿದ್ದು, ಇದು ಅವಿವೇಕದ ನಿರ್ಧಾರವಾಗಿದೆ. ಈ ನಿರ್ಧಾರದ ಹಿಂದೆ ಯಾವುದೇ ತರ್ಕ, ಸ್ಪಷ್ಟತೆ ಇಲ್ಲ.

ಶಿಕ್ಷಣದ ಹಕ್ಕು ಜಾರಿಗೆ ತಂದ ನಂತರ ನಿರಂತರ ಮತ್ತು ವ್ಯಾಪಕ ಮೌಲ್ಯವೌಪನವನ್ನು ೧ರಿಂದ 9ನೇ ತರಗತಿ ಮಕ್ಕಳಿಗೆ ನಡೆಸಲಾಗುತ್ತದೆ. ಸಂಚಿತ ಸಾಧನೆ ಅಥವಾ ೧೦ ವರ್ಷಗಳ ಸಂಚಿತ ಸಾಧನೆಯನ್ನು ಆಧಾರವಾಗಿಟ್ಟುಕೊಂಡು ಮಕ್ಕಳನ್ನು ಅಳೆಯಲು ಮಾನದಂಡಗಳಿರುವಾಗ ಅವರಿಗೆ ಪರೀಕ್ಷೆ ನಡೆಸಿ ಅವರನ್ನು ಮತ್ತಷ್ಟು ಗೊಂದಲಕ್ಕೆ ತಳ್ಳುತ್ತೇವೆ ಎಂದರೆ ಇದು ನಿಜಕ್ಕೂ ವಿಷಾದನೀಯ. ಇದನ್ನು ಶೈಕ್ಷಣಿಕ ವಲಯದಲ್ಲಿ ಕೆಲಸ ಮಾಡುವ ಯಾರೂ ಒಪ್ಪಲು ಸಾಧ್ಯವಿಲ್ಲ.

► ವಾ.ಭಾ.:ಪರೀಕ್ಷೆ ನಡೆಸುವ ನಿರ್ಧಾರದ ಹಿಂದೆ ವ್ಯಾಪಾರಿ ಮನೋಭಾವ ಇದೆಯೇ?

 ನಿ: ಖಂಡಿತ ಅದನ್ನು ತಳ್ಳಿಹಾಕುವಂತಿಲ್ಲ. ಮಕ್ಕಳನ್ನು ಹೇಗೆ ತೇರ್ಗಡೆ ಮಾಡಬಹುದು ಎಂದು ಎಲ್ಲ ಸಾಧ್ಯತೆ ಬಗ್ಗೆ ನಾವು ಹೇಳುತ್ತಿದ್ದರೂ ಮೊಂಡುತನ ನೋಡಿದರೆ ಇದರಲ್ಲಿ ಲಾಭದ ದೃಷ್ಟಿ ಇರಬಹುದು. ಪರೀಕ್ಷಾ ಶುಲ್ಕ ಸಂಗ್ರಹವು ಇದರ ಹಿಂದಿದೆ ಎನ್ನಬಹುದು. ದಲಿತ, ಹಿಂದುಳಿದ, ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಶಿಕ್ಷಣ ಮುಂದುವರಿಸುವ ಅವಕಾಶ ಕಲ್ಪಿಸುವ ಬದಲು ಪರೀಕ್ಷೆ ಅಸ್ತ್ರ ಬಳಸಿ ಅವರನ್ನು ಶಿಕ್ಷಣ ವ್ಯವಸ್ಥೆಯಿಂದ ಹೊರ ನೂಕುತ್ತಿರುವ ಕೆಲಸ ಮಾಡುತ್ತಿರುವುದು ಅತ್ಯಂತ ಅಪಾಯಕಾರಿಯಾಗಿದೆ. ೧೦ನೇ ತರಗತಿಯಲ್ಲಿ ಏನನ್ನು ಕಲಿಬೇಕು ಅದನ್ನು ಎಲ್ಲ ಮಕ್ಕಳಿಗೂ ಕಲಿಸಲು ಒತ್ತು ನೀಡಬೇಕಾಗಿದೆ. ಕೇವಲ ಪರೀಕ್ಷೆ ಮಾಡುವ ಮೂಲಕ ಅವರನ್ನು ಶಿಕ್ಷಣ ವ್ಯವಸ್ಥೆಯಿಂದ ದೂರ ಇಡುವಂತಹ ಕೆಲಸ ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಸರಿಯಲ್ಲ.

► ವಾ.ಭಾ.: ಸಾಂದರ್ಭಿಕವಾಗಿ ಶಿಕ್ಷಣದಲ್ಲಿ ಸಮಾನತೆ ತರಲು ಕೊರೋನ ಒಂದು ರೀತಿಯಲ್ಲಿ ಕಾರಣವಾಯಿತೇ?

ನಿ: ಕೊರೋನ ಕೇವಲ ಸಾಂದರ್ಭಿಕ ಕಾರಣ ಮಾತ್ರ. ಎಲ್ಲ ಮಕ್ಕಳಲ್ಲಿ ಕಲಿಯಲು ಸಾಮರ್ಥ್ಯ ಇರುತ್ತದೆ. ನಾವು ನೀಡುವ ಬೆಂಬಲ, ಅವಕಾಶಗಳ ಮೇಲೆ ಅವಲಂಬಿತವಾಗಿರುತ್ತದೆ. ಸಾಮಾನ್ಯವಾಗಿ ೧೦೦ ಮಕ್ಕಳಲ್ಲಿ ೫ ಮಕ್ಕಳು ಬಹಳ ಬುದ್ಧಿವಂತರು, ೫ ಬಹಳ ದಡ್ಡರು. ಇನ್ನು ೯೦ ಮಕ್ಕಳಿಗೆ ಯಾವ ರೀತಿಯ ಅವಕಾಶ ಕಲ್ಪಿಸುತ್ತೇವೆಯೋ ಅದರ ಮೇಲೆ ಅವರ ಬೆಳವಣಿಗೆ ಅವಲಂಬಿತವಾಗಿದೆ. ೯೦ ಮಕ್ಕಳು ದಡ್ಡರಲ್ಲ. ಕೇವಲ ೫ ಮಕ್ಕಳು ಮಾತ್ರ ಬುದ್ಧಿವಂತರಲ್ಲ. ೯೦ ಮಕ್ಕಳನ್ನು ಪ್ರತಿಭಾವಂತರನ್ನಾಗಿಸಲು ನಾವು ಕ್ರಮ ಕೈಗೊಳ್ಳುತ್ತಿಲ್ಲ. ೧೦ನೇ ತರಗತಿಯ ಮಕ್ಕಳ ಕಲಿಕೆಗೆ ಪೂರಕವಾಗಿ ಪ್ರಯತ್ನಗಳನ್ನು ಮಾಡಬೇಕಾಗಿತ್ತು. ಆದರೆ ನಾವು ಕಲಿಸಲು ಆಸಕ್ತಿ ವಹಿಸದೆ ಪರೀಕ್ಷೆ ಮಾಡಲಿಕ್ಕೆ ಎಲ್ಲ ರೀತಿಯ ಆಸಕ್ತಿ ವಹಿಸುತ್ತಿದ್ದೇವೆ. ತತ್ವಜ್ಞಾನಿ ನೋಮ್ ಚೋಮ್‌ಸ್ಕಿ ಹೇಳುತ್ತಾರೆ ‘ಕೇವಲ ಪರೀಕ್ಷೆ ಮಾಡಲು ಕಲಿಸುವುದು ಬಹಳ ಕೆಟ್ಟ ಕ್ರಮ’ ಅದನ್ನು ವಿಸ್ತರಿಸಿ ಹೇಳುವುದಾದರೆ ಕಲಿಸದೆ ಪರೀಕ್ಷೆ ಒ ನೀಚತನವಾಗಿದೆ.

► ವಾ.ಭಾ.: ಆನ್‌ಲೈನ್ ಶಿಕ್ಷಣದಲ್ಲಿರುವ ಗೊಂದಲಗಳ ಕುರಿತು ತಮ್ಮ ಅಭಿಪ್ರಾಯವೇನು?

 ನಿ: ಆನ್‌ಲೈನ್ ಶಿಕ್ಷಣದ ಪ್ರಮುಖ ಉದ್ದೇಶವನ್ನು ನಾವು ಪ್ರಶ್ನಿಸಬೇಕಾಗಿದೆ. ಶಿಕ್ಷಣದ ಮೂಲ ಉದ್ದೇಶ ಸಾಮಾಜೀಕರಣ. ಸಮಾಜದಲ್ಲಿ ಉತ್ತಮ ನಾಗರಿಕನನ್ನು ರೂಪಿಸುವುದು. ಮಕ್ಕಳಲ್ಲಿ ಮಾನವೀಯತೆ ಬೆಳೆಸುವುದು, ಮಕ್ಕಳು ಶಾಲೆಗೆ ಬಂದು ತರಗತಿಯಲ್ಲಿ ಕುಳಿತು ಎಲ್ಲರೊಂದಿಗೆ ಬೆರೆಯಬೇಕು. ಪ್ರೀತಿ, ವಾತ್ಸಲ್ಯ ಕಲಿಯಬೇಕು ಇದು ಸಾಮಾಜೀಕರಣ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸುವ ಒಂದು ಪ್ರಕ್ರಿಯೆ. ಇದನ್ನು ತಂತ್ರಜ್ಞಾನ ಶಿಕ್ಷಣದಲ್ಲಿ ಕಾಣಲು ಅಸಾಧ್ಯ. ಶಿಕ್ಷಣ ವ್ಯವಸ್ಥೆಯಲ್ಲಿ ತಂತ್ರಜ್ಞಾನ ಸ್ವಲ್ಪ ಪೂರಕವೇ ಹೊರತು ಪರ್ಯಾಯವಲ್ಲ. ಶಿಕ್ಷಣವನ್ನು ನಾವು ಸಂಕುಚಿತಗೊಳಿಸಿದ್ದೇವೆ. ಶಿಕ್ಷಣ, ಮಾಹಿತಿಯ ವ್ಯತ್ಯಾಸವನ್ನು ತಿಳಿಯಬೇಕಾಗಿದೆ. ಮಾಹಿತಿಯನ್ನು ಹಂಚುವುದು, ಒದಗಿಸುವುದು ಶಿಕ್ಷಣ ಅಲ್ಲ. ಶಿಕ್ಷಣ ಒಂದು ಪ್ರಕ್ರಿಯೆ. ಸಂವಿಧಾನದ ಆಶಯಗಳನ್ನು ಸಾಕಾರಗೊಳಿಸಲು ಶಿಕ್ಷಣ ಸಹಕಾರಿಯಾಗಿದೆ. ಸಂವಿಧಾನದ ಪ್ರಸ್ತಾವನೆಯಲ್ಲಿರುವಂತೆ ಭಾರತವನ್ನು ಸಮಾಜವಾದಿ, ಜಾತ್ಯತೀತ, ಸಾರ್ವಭೌಮ, ಗಣತಂತ್ರವನ್ನಾಗಿ ನಿರ್ಮಿಸುವುದೇ ನಮ್ಮ ಉದ್ದೇಶ. ಇದಕ್ಕೆ ಶಿಕ್ಷಣವೇ ಪ್ರಮುಖ ಸಾಧನವಾಗಿದೆ. ಶಿಕ್ಷಣದ ಮೂಲಕ ಭ್ರಾತೃತ್ವ, ಸಹಿಷ್ಣುತೆ, ಬಹುತ್ವ ಬೆಳೆಸಿದರೆ ಮಾತ್ರ ಭಾರತ ಸಮಾಜವಾದಿ, ಜಾತ್ಯತೀತ, ಸಾರ್ವಭೌಮ, ಗಣತಂತ್ರ ರಾಷ್ಟ್ರವಾಗಲು ಸಾಧ್ಯ. ಆದರೆ ಅಂತಹ ಶಿಕ್ಷಣವನ್ನು ನಮ್ಮಲ್ಲಿ ನೀಡಲಾಗುತ್ತಿಲ್ಲ. ಶಿಕ್ಷಣ ಇಂದು ವ್ಯಾಪಾರದ ವಸ್ತು, ಮಾಹಿತಿಯ ಸಾಧನ, ಅಂಕ ಗಳಿಕೆಗೆ, ಪ್ರತಿಷ್ಠೆಗೆ ವ್ಯವಸ್ಥೆ ನಡೆಸುವ ರೀತಿಯಾಗಿರುವುದು ದುರ್ದೈವ. ಮೆಕಾಲೆ ಶಿಕ್ಷಣ ವ್ಯವಸ್ಥೆಯನ್ನು ವಿರೋಧಿಸಿದವರೇ, ಸಂಪೂರ್ಣ ಬದಲಾವಣೆ ತರಬೇಕು ಎಂದವರೇ ಅದನ್ನೇ ಮುಂದುವರಿಸುತ್ತಿರುವುದು ನಿಜಕ್ಕೂ ವಿಪರ್ಯಾಸ.

► ವಾ.ಭಾ.: ವಿದ್ಯಾಗಮ ರೀತಿಯಲ್ಲಿ ಯೋಜನೆ ರೂಪಿಸಿ ಸರಕಾರ ಶಿಕ್ಷಣ ನೀಡಬಹುದಿತ್ತಲ್ಲವೇ?

  ನಿ: ಖಂಡಿತ ಅದಕ್ಕೆ ಅನೇಕ ಅವಕಾಶಗಳಿದ್ದವು. ಕಳೆದ ವರ್ಷ ಆಗಸ್ಟ್‌ನಲ್ಲಿ ನಾವು ಶಾಲೆಗಳನ್ನು ಪ್ರಾರಂಭಿಸುವಂತೆ ಒತ್ತಾಯಿಸಿದ್ದೇವು. ಏಕೆಂದರೆ ಮಕ್ಕಳಿಗೆ ಕೊರೋನ ರೋಗ ಬಾಧಿಸುವುದು ವಿರಳ. ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿರುತ್ತದೆ. ಪ್ರಮುಖ ಅಂಶವೆಂದರೆ ಕರ್ನಾಟಕದ ೪ ಸಾವಿರ ಶಾಲೆಗಳಲ್ಲಿ ೧ರಿಂದ ೧೦ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ೧೫ ಸಾವಿರ ಶಾಲೆಗಳಲ್ಲಿ ೨೫ಕ್ಕಿಂತ ಕಡಿಮೆ, ೨೩ ಸಾವಿರ ಶಾಲೆಗಳಲ್ಲಿ ೫೦ಕ್ಕಿಂತ ಕಡಿಮೆ ಮಕ್ಕಳಿದ್ದಾರೆ. ಪ್ರತಿ ಶಾಲೆಯಲ್ಲಿ ಕೋವಿಡ್ ಮಾರ್ಗಸೂಚಿ ಪಾಲಿಸಿ ಶಿಕ್ಷಣ ನೀಡಬಹುದಿತ್ತು. ಕಲಿಕೆಯ ನಿರಂತರತೆ ಸಾಧ್ಯವಿತ್ತು. ಅಂತಹ ಯಾವ ಪ್ರಯತ್ನವನ್ನ್ನೂ ಸರಕಾರ ಮಾಡಲಿಲ್ಲ. ಶಿಕ್ಷಕರ ಒತ್ತಡಕ್ಕೆ ಮಣಿದು ವಿದ್ಯಾಗಮವನ್ನು ನಿಲ್ಲಿಸಲಾಯಿತು. ಮಕ್ಕಳ ಕಲಿಕೆ, ಹಿತಾಸಕ್ತಿಗಿಂತ ರಾಜಕೀಯ, ವರ್ಚಸ್ಸು, ಕೆಲವೇ ವರ್ಗಗಳ ಹಿತ ಕಾಪಾಡುವುದು ಸರಕಾರಕ್ಕೆ ಮುಖ್ಯವಾಯಿತು. ಶಿಕ್ಷಣ ನೀಡುವುದು ಸರಕಾರದ ಉದ್ದೇಶವಾಗಲಿಲ್ಲ. ಶಾಲೆ ಕೇವಲ ಕಲಿಕೆಯ ಜಾಗವಾಗಿರಲಿಲ್ಲ. ಬಿಸಿ ಊಟ, ರೋಗ ನಿರೋಧಕ ಮಾತ್ರೆ ನೀಡುತ್ತಾ ಮಕ್ಕಳನ್ನು ಮಾನಸಿಕವಾಗಿ ಸದೃಢಗೊಳಿಸಿ ಶಾಲೆ ಮಕ್ಕಳಿಗೆ ಮನೆಯಾಗಿ ಬಿಂಬಿತವಾಗಿತ್ತು. ಅವೆಲ್ಲದರಿಂದ ವಂಚಿತರಾಗಿರುವ ಪರಿಣಾಮ ಇಂದು ೯ರಿಂದ ೧೦ ಲಕ್ಷ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಈ ಎಲ್ಲ ಅನಾಹುತಗಳಿಗೆ ಸರಕಾರವೇ ಹೊಣೆಯಾಗಬೇಕಾಗುತ್ತದೆ.

►ವಾ.ಭಾ.: ಕೊರೋನ ೩ನೇ ಅಲೆ ಬಗ್ಗೆ ಭಯ, ಚರ್ಚೆ ಆರಂಭವಾಗಿದ್ದು, ಮಕ್ಕಳಿಗೆ ಹೆಚ್ಚು ಅಪಾಯವೇ?

ನಿ: ಭಯ ಹುಟ್ಟಿಸುವ ಮೂಲಕ ಇಲ್ಲಿಯವರೆಗೆ ಅನೇಕ ತಪ್ಪುಗಳನ್ನು ಮಾಡಲಾಗಿದೆ. ಪ್ರಾರಂಭದಲ್ಲಿಯೇ ಕೊರೋನ ಬಗ್ಗೆ ಜನರಲ್ಲಿ ಸರಿಯಾದ ತಿಳುವಳಿಕೆ ಮೂಡಿಸಲಿಲ್ಲ. ಮೂರನೇ ಅಲೆ ಬಗ್ಗೆಯೂ ಅದೇ ನಡೆಯುತ್ತಿದೆ. ಕರ್ನಾಟಕದ ತಾಂತ್ರಿಕ ಸಲಹಾ ಸಮಿತಿಯಲ್ಲಿ ವಿಶೇಷ ತಂತ್ರಜ್ಞರು(ಡೋಮೈನ್ ಎಕ್ಸ್‌ಪರ್ಟ್ಸ್) ಇಲ್ಲದಿರುವುದೇ ದುರಂತವಾಗಿದೆ. ಮಕ್ಕಳ ತಜ್ಞರೊಂದಿಗೆ ನಾವು ಈಗಾಗಲೇ ಸಭೆ ಮಾಡಿದ್ದೇವೆ. ೩ನೇ ಅಲೆ ಮಕ್ಕಳಿಗೆ ಹೆಚ್ಚು ಅಪಾಯ ಎಂದು ಯಾವುದೇ ಸಂಶೋಧನೆ ತಿಳಿಸಿಲ್ಲ. ಇವೆಲ್ಲವೂ ಊಹಾಪೋಹ ಎಂಬುದಾಗಿ ತಜ್ಞರು ಹೇಳಿದ್ದಾರೆ. ೩ನೇ ಅಲೆ ಮಕ್ಕಳ ಮೇಲೆ ವಿಶೇಷ ಪರಿಣಾಮ ಬೀರುವುದಿಲ್ಲ. ಸಾಮಾನ್ಯವಾಗಿ ಮಕ್ಕಳಿಗೆ ಸೋಂಕು ತಗಲಿದರೂ ಅಗತ್ಯ ಚಿಕಿತ್ಸೆ ನೀಡಬೇಕು. ಇದರ ಬಗ್ಗೆ ಭಯ ಹುಟ್ಟಿಸುವುದರಲ್ಲಿ ಅರ್ಥವಿಲ್ಲ ಎಂದು ಇಂಡಿಯನ್ ಅಕಾಡಮಿ ಆಫ್ ಪಿಡಿಯಾಟ್ರಿಕ್ಸ್ ಸಂಸ್ಥೆ ತಿಳಿಸಿದೆ. ಔಷಧಿ, ಚಿಕಿತ್ಸೆ ಇದ್ದರೂ ಭಯ ಹುಟ್ಟಿಸುವುದು, ಭಯ ಪಡುವುದಾದರೂ ಏಕೆ ಎಂದು ವೈದ್ಯರು ಪ್ರಶ್ನಿಸುತ್ತಿದ್ದಾರೆ. ಆದ್ದರಿಂದ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಿ ಶಾಲೆ ಆರಂಭಿಸಬಹುದು.

► ವಾ.ಭಾ.: ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ದುಡಿಯುತ್ತಿರುವ ಶಿಕ್ಷಕರು, ಸಿಬ್ಬಂದಿಗೆ ಸರಕಾರ ನೆರವಾಗಲಿಲ್ಲ ಏಕೆ?

 ನಿ: ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರು, ಸಿಬ್ಬಂದಿಗೆ ಸರಕಾರ ನೆರವಾಗಬೇಕಿತ್ತು. ಶಿಕ್ಷಣ ಹಕ್ಕು ಕಾಯ್ದೆ (೨೦೧೦)ಯಲ್ಲಿ ಈ ಶಿಕ್ಷಕರು, ಸಿಬ್ಬಂದಿಗೆ ಎಲ್ಲ ಸೌಲಭ್ಯ ನೀಡಬೇಕು ಎಂದು ಹೇಳಲಾಗಿದೆ. ಆದರೆ ಸರಕಾರ ಆ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಿಲ್ಲ. ಅದು ಜಾರಿಯಾಗಿದ್ದರೆ ಖಾಸಗಿ ಶಿಕ್ಷಕರು ಇಂದು ಬೀದಿಗೆ ಬೀಳುತ್ತಿರಲಿಲ್ಲ. ಕೊರೋನ ಸಂದರ್ಭದಲ್ಲಿ ಈಗ ಅವರ ಸಂಕಷ್ಟಗಳ ಬಗ್ಗೆ ಮಾತನಾಡುತ್ತಿದ್ದೇವೆ. ಇಷ್ಟು ವರ್ಷಗಳಲ್ಲಿ ನಾವು ಯಾರು ಈ ಕುರಿತು ಪ್ರಶ್ನಿಸಲೇ ಇಲ್ಲ. ಇನ್ನು ಮುಂದಾದರೂ ಸರಕಾರ ಅವರ ನೆರವಿಗೆ ಧಾವಿಸಬೇಕು.

'೨೦ಖಾಸಗಿ ಶಾಲೆಗಳಲ್ಲಿ ಓದುತ್ತಿರುವ  ಪಾಲಕರು ಶ್ರೀಮಂತರಲ್ಲ. ಬಹುತೇಕರು ಮಧ್ಯಮ, ಕೆಳ ವರ್ಗದವರಾಗಿದ್ದಾರೆ. ಶಾಲಾ ಶುಲ್ಕ ಪಾವತಿಸಲು ಖಾಸಗಿ ಸಂಸ್ಥೆಗಳು ಒತ್ತಾಯಿಸುತ್ತಿರುವುದು ಸರಿಯಲ್ಲ. ಹಂತ ಹಂತವಾಗಿ ಶುಲ್ಕ ಕಟ್ಟಿಸಿಕೊಳ್ಳಬೇಕು. ಶಾಲಾ ಶುಲ್ಕ ನಿಗದಿಗೆ ಸರಕಾರ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸಬೇಕು. ಸರಕಾರ ಮಕ್ಕಳ, ಪಾಲಕರ ಹಿತ ಕಾಪಾಡಬೇಕಾಗಿದೆ.

► ವಾ.ಭಾ: ಈ ಕಾಲಘಟ್ಟ ಶಿಕ್ಷಣ ವ್ಯವಸ್ಥೆಯ ಆಮೂಲಾಗ್ರ ಬದಲಾವಣೆಗೆ ಕಾರಣವಾಗಲಿದೆಯೇ?

 ನಿ: ಬದಲಾವಣೆಗೆ ಇದು ಸಕಾಲ. ಕೋವಿಡ್ ಅನೇಕ ನಷ್ಟ ಮಾಡಿ ಸಕಾರಾತ್ಮಕ ಸೂಚನೆಗಳನ್ನು ಕೊಟ್ಟಿದೆ. ಸಾರ್ವಜನಿಕ ಶಿಕ್ಷಣ, ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಇದ್ದ ದೇಶಗಳು ಕೋವಿಡ್‌ನ್ನು ವಸ್ತುನಿಷ್ಠವಾಗಿ ಧೈರ್ಯವಾಗಿ ಎದುರಿಸಿದವು. ಈ ಸಂದೇಶವನ್ನು ನಾವು ಅನುಸರಿಸಬೇಕಾಗಿದೆ. ಸಂಪನ್ಮೂಲ ಕಡಿಮೆ ಮಾಡುವ ಮೂಲಕ ಸರಕಾರಿ ಶಾಲೆ, ಸರಕಾರಿ ಆಸ್ಪತ್ರೆಗಳನ್ನು ದುರ್ಬಲಗೊಳಿಸಲಾಯಿತು. ಇದು ಖಾಸಗೀಕರಣದ ದೊಡ್ಡ ಹುನ್ನಾರವಾಗಿದೆ. ಕನಿಷ್ಠ ಆರೋಗ್ಯ, ಶಿಕ್ಷಣ, ಉದ್ಯೋಗ, ಮೂಲಭೂತ ಸೌಕರ್ಯ ನೀಡುವುದು ಸರಕಾರದ ಹೊಣೆ. ಇವೆಲ್ಲವನ್ನು ನೀಡದಿದ್ದರೆ ಸರಕಾರ ಏಕೆ ಬೇಕು ಎಂದು ಜನರೇ ಮುಂದೆ ಪ್ರಶ್ನಿಸಲಿದ್ದಾರೆ. ಅದಕ್ಕೆ ಇದು ಬದಲಾವಣೆಗೆ ಸಕಾಲ.

ರಾಜ್ಯದ ಎಲ್ಲ ಸರಕಾರಿ ಶಾಲೆಗಳನ್ನು ಕೇಂದ್ರೀಯ ಶಾಲೆಗಳ ಮಟ್ಟಕ್ಕೆ ಮೇಲ್ದರ್ಜೆಗೇರಿಸಿದರೆ ಯಾವ ಪಾಲಕರೂ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳುಹಿಸುವುದಿಲ್ಲ. ಶಿಕ್ಷಣದಲ್ಲಿ ಮೊದಲು ಸಮಾನತೆಯನ್ನು ಜಾರಿಗೊಳಿಸಬೇಕು. ಸಂವಿಧಾನವನ್ನು ಸಂಪೂರ್ಣ ಜಾರಿಗೊಳಿಸಲು ಕೋವಿಡ್ ಒಂದು ಅವಕಾಶ ನೀಡಿದ್ದು, ಅದನ್ನು ಎಲ್ಲರೂ ಬಳಸಿಕೊಂಡು ಬಲಿಷ್ಠ ಶಿಕ್ಷಣ ವ್ಯವಸ್ಥೆಯನ್ನು ಕಟ್ಟಿದರೆ ದೇಶದ ಭವಿಷ್ಯವೇ ಬದಲಾಗಲಿದೆ. ಈ ದೇಶದ ಭವಿಷ್ಯ ಶಾಲಾ ತರಗತಿಗಳಲ್ಲಿ ರೂಪುಗೊಳ್ಳುತ್ತದೆ ಎಂಬ ಕೊಠಾರಿ ಆಯೋಗದ ಘೋಷವಾಕ್ಯವನ್ನು ಸರಕಾರಗಳು ಇನ್ನಾದರೂ ಜಾರಿಗೊಳಿಸಬೇಕು.

ಸಂದರ್ಶನದ ವೀಡಿಯೊವನ್ನು ‘ವಾರ್ತಾಭಾರತಿ’ ಯುಟ್ಯೂಬ್ ಚಾನೆಲ್‌ನಲ್ಲಿ ವೀಕ್ಷಿಸಬಹುದು.
ಬರಹ ರೂಪ: ಬಾಲಕೃಷ್ಣ ಜಾಡಬಂಡಿ
ಸೌಜನ್ಯ : ವಾರ್ತಾಭಾರತಿ ೧೫.೬.೨೦೨೧

Monday, July 27, 2020

ಜಾನವಿ

10ನೇ ತರಗತಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿ ಆಗತಾನೆ ಪದವಿ ಪೂರ್ವ ಕಾಲೇಜಿಗೆ ಪ್ರವೇಶ ಪಡೆದ ಜಾನವಿ ಮುಜುಗರ ಪಟ್ಟುಕೊಳ್ಳುವ ಸ್ವಭಾವದವಳು. ಅವಳ ಕಪ್ಪು ಬಣ್ಣ ಮತ್ತು ಕುಟುಂಬದ ಬಡತನ ಅವಳ ಇಂತಹ ಆಲೋಚನೆಗೆ ಕಾರಣವಾಗಿತ್ತು. ಕಾಲೇಜಿನಲ್ಲಿಯೂ ಎಲ್ಲರೊಂದಿಗೆ ಬೆರೆತು ನಡೆದುಕೊಳ್ಳದ ಅವಳು ಕೊನೆಯ ಬೆಂಚಿನಲ್ಲಿ ಕುಳಿತುಕೊಳ್ಳುವ ರೂಢಿ ಮಾಡಿಕೊಂಡಿದ್ದಳು.


ಇನ್ನುಳಿದ ವಿದ್ಯಾರ್ಥಿನಿಯರು ಕಾಲೇಜಿಗೆ ಸ್ಕೂಟಿ, ಕಾರಿನಲ್ಲಿ ಬರುವುದನ್ನು ಮುಗ್ಗದತೆಯಿಂದ ಕಾಣುವ ಅವಳು ಕುಟುಂಬದ ಬಡತನ, ತಂದೆ-ತಾಯಿಯ ಅವಿರತ ಪರಿಶ್ರಮ ಸೇರಿದಂತೆ ಇನ್ನಿತರ ಕಾರಣಗಳಿಂದ ತನ್ನ ಮನದ ಆಸೆ, ಆಕಾಂಕ್ಷೆಗಳು ಕೂಡ ದಬಾಯಿಸುವ ರೂಢಿ ಬೆಳೆಸಿಕೊಂಡಿದ್ದಳು.

ಪ್ರತಿ ವರ್ಷದಂತೆ ಶೈಕ್ಷಣಿಕ ವರ್ಷದ ತರಗತಿಗಳು ಪ್ರಾರಂಭವಾದವು. ಯಾವತ್ತು ಕೂಡ ಕಾಲೇಜಿಗೆ ತಪ್ಪಿಸಿಕೊಂಡವಳಲ್ಲ ಜಾನವಿ. ಒಂದು ದಿನ ಕಾಲೇಜಿಗೆ ಹೋಗಬೇಕು ಎಂದು ಸಿದ್ದವಾಗುತ್ತಿದ್ದಂತೆಯೇ ಜೋರಾಗಿ ಮಳೆ ಪ್ರಾರಂಭವಾಗಿ ಕಾಲೇಜು ಹೋಗದೆ ಮನೆಯಲ್ಲಿಯೇ ಉಳಿದಳು.

ಮರುದಿನ ಕಾಲೇಜಿಗೆ ಹೋಗುತ್ತಿದ್ದಂತೆ ತನ್ನ ತರಗತಿ ಕೋಣೆಯಲ್ಲಿರುವ ಇನ್ನಿತರ ವಿದ್ಯಾರ್ಥಿನಿಯರ ಹತ್ತಿರ ಹಿಂದಿನ ದಿನದ ನೋಟ್ಸ್ ನೀಡುವಂತೆ ಮನವಿ ಮಾಡಿಕೊಂಡಾಗ ಅವಳ ಡ್ರೇಸಿಂಗ್, ಹಳ್ಳಿ ಜೀವನದ ಸರಳತೆ, ಫ್ಯಾಶನ್ ಜಮಾನದಿಂದ ತೀರ ದೂರ ಉಳಿದ ಆಕೆಯ ಮುಗ್ದತೆಯಿಂದ ಯಾರೊಬ್ಬರು ಕೂಡ ಅವಳಿಗೆ ನೋಟ್ಸ್ ನೀಡಲು ಮುಂದೆ ಬರಲಿಲ್ಲ.

ಅಷ್ಟಕ್ಕೂ ಜಾನವಿ ತಲೆ ಕೆಡಿಸಿಕೊಳ್ಳದೇ ತನಗೆ ಅನುಕೂಲವಾದಂತೆ ಹಿಂದಿನ ದಿನದ ನೋಟ್ಸ್ ಸಿದ್ಧಪಡಿಸಿಕೊಂಡು ಓದಿನಲ್ಲಿ ತೊಡಗಿದಳು. ತರಗತಿಗಳು ಪ್ರಾರಂಭವಾಗಿ ಸುಮಾರು ಒಂದುವರೆ ತಿಂಗಳು ಕಳೆದಿತ್ತು. ಅಷ್ಟೋತ್ತಿಗೆ ಇತಿಹಾಸ ಬೋಧಿಸುವ ಉಪನ್ಯಾಸಕರು ಒಂದು ಘಟಕ ಪರೀಕ್ಷೆಗಾಗಿ ಸಿದ್ಧರಾಗುವಂತೆ ತರಗತಿ ವಿದ್ಯಾರ್ಥಿಗಳಿಗೆ ಸೂಚಿಸಿದರು.

ಜಾನವಿಗೆ ಮೊದಲಿನಿಂದಲೇ ಓದಿನಲ್ಲಿ ಎಲ್ಲಿಲ್ಲದ ಉತ್ಸಾಹ ಮತ್ತು ಉಲ್ಲಾಸ. ಕಾಲೇಜಿಗೆ ಮೋಜು ಮಸ್ತಿ ಮಾಡಲು ಬರುವಂತಹ ಇನ್ನಿತರ ವಿದ್ಯಾರ್ಥಿಗಳಂತೆ ಜಾನವಿ ಯಾವತ್ತೂ ಕೂಡ ಕಾಲೇಜಿನಿಂದ ಅನಗತ್ಯವಾಗಿ ಹೊರ ಹೋದವಳಲ್ಲ. ಅಲ್ಲದೇ ಕಾಲೇಜಿನ ಯಾವ ವಿಷಯಗಳ ತರಗತಿಗೂ ಕೂಡ ಅವಳು ತಪ್ಪಿಸಿಕೊಂಡವಳಲ್ಲ.

ಅಂದು ಬುಧವಾರ, ತರಗತಿ ಕೋಣೆಯಲ್ಲಿ ಸುಮಾರು 100 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಎಲ್ಲರೂ ಘಟಕ ಪರೀಕ್ಷೆಯ ಕುರಿತು ಗುಸುಗುಸು ಮಾತನಾಡಿಕೊಳ್ಳುವಲ್ಲಿ ತಲ್ಲಿನ. ಆದರೇ ಜಾನವಿ ಮಾತ್ರ ತಾನು ದಿನ ಕುಳಿತುಕೊಳ್ಳುವ ಕೊನೆಯ ಬೆಂಚಿನಲ್ಲಿ ಕುಳಿತುಕೊಂಡು ಓದಿನಲ್ಲಿ ಮಗ್ನಳಾಗಿದ್ದಳು.

ಇತಿಹಾಸ ಬೋಧನೆಯ ಉಪನ್ಯಾಸಕರು ತರಗತಿ ಕೋಣೆ ಪ್ರವೇಶಿಸಿ, ಮುಂಚೆಯೇ ಹೇಳಿದಂತೆ ಪರೀಕ್ಷೆಗಾಗಿ ತನ್ನಲ್ಲಿಯ ಪ್ರಶ್ನೆ ಪತ್ರಿಕೆಗಳು ಒಂದೊಂದೆ ವಿದ್ಯಾರ್ಥಿಗೆ ನೀಡುತ್ತ ಸಾಗಿದರು. ಎಲ್ಲರ ಮುಖದಲ್ಲಿ ನಿರುತ್ಸಾಹ, ನಿರಾಸೆಯ ಭಾವ. ಆದರೇ ಜಾನವಿ ಮಾತ್ರ ಖುಷಿಯಿಂದ ಪ್ರಶ್ನೆ ಪತ್ರಿಕೆ ಪಡೆದು ಉತ್ತರಿಸಲು ತವಕದಲ್ಲಿರುವಂತೆ ಕಾಣುತ್ತಿತ್ತು.

ಸಪ್ಪೆ ಮುಖದಿಂದಲೇ ಎಲ್ಲರೂ ಪರೀಕ್ಷೆ ಬರೆದು ಬೇಗನೇ ಉತ್ತರಪತ್ರಿಕೆ ನೀಡಿದರು. ಆದರೇ ಜಾನವಿ ಮಾತ್ರ ನಿಗದಿತ ಅವಧಿಯ ಕೊನೆಯ ಕ್ಷಣದವರೆಗೂ ತನ್ನ ಉತ್ತರ ಪತ್ರಿಕೆ ಬರೆಯುವುದನ್ನು ನೋಡಿ ತಗರತಿಯ ಇನ್ನುಳಿದ ಹುಡುಗಿಯರು ಅವಳ ಕುರಿತು ಆಡಿಕೊಳ್ಳುತ್ತಿದರು.

ಪರೀಕ್ಷೆ ಮುಗಿಯಿತು ಎಲ್ಲರಿಗೂ ತಾನು ಪಡೆದ ಅಂಕಗಳ ವಿವರ ಪಡೆಯಬೇಕೆಂಬ ಕುತೂಹಲ. ಪ್ರತಿಯೊಬ್ಬರು ಇತಿಹಾಸ ಬೋಧನೆಯ ಉಪನ್ಯಾಸಕರಿಗೆ ಪ್ರತಿದಿನ ಪರೀಕ್ಷೆಯ ಕುರಿತು ಕೇಳುವುದೇ ಕೇಳುವುದು. ಅಂದು ಶನಿವಾರ. ಪರೀಕ್ಷೆಯ ಎಲ್ಲರ ಉತ್ತರಪತ್ರಿಕೆಗಳು ಹಿಡಿದುಕೊಂಡು ಬರುತ್ತಿದ್ದಂತೆ ಎಲ್ಲರ ಮನದಲ್ಲಿ ಭಯ, ದುಗುಡ ಆವರಿಸಿಕೊಂಡಿತ್ತು.

ತರಗತಿ ವಿದ್ಯಾರ್ಥಿಗಳು ಪಡೆದ ಅಂಕಗಳು ಹೇಳುತ್ತ ನಡೆದರು. ಮುಂದುವರೆದು ಜಾನವಿ ಸಂಖ್ಯೆಗಳು ಹೇಳುತ್ತಿದ್ದಂತೆ ಇಡಿ ತರಗತಿ ಕೋಣೆಯೇ ಆಶ್ಚರ್ಯ ಮತ್ತು ನಿಶ್ಯಬ್ದವಾಯಿತು. ಆಕೇ ಪಡೆದ ಅಂಕ 25ಕ್ಕೆ 25 ಅಂದರೇ ಯಾವ ಪ್ರಶ್ನೆಗಳು ಕೂಡ ಬಿಟ್ಟಿರದೇ ಪ್ರತಿಯೊಂದು ಬರೆದು ಪಡೆದಿರುವ ಅಂಕಗಳವು.


ಕೊನೆಯ ಬೆಂಚಿನಲ್ಲಿ ಕುಳಿತುಕೊಳ್ಳುವ ಜಾನವಿಗೆ ಉಪನ್ಯಾಸಕರು ಕರೆದು ಮುಂದಿನ ಬೆಂಚಿನಲ್ಲಿ ಕುಳಿತುಕೊಳ್ಳುವಂತೆ ಸೂಚಿಸಿದರು. ಅಷ್ಟೇ ಅಲ್ಲದೇ ತರಗತಿಯ ಎಲ್ಲ ವಿದ್ಯಾರ್ಥಿಗಳಿಗೆ ಚಪ್ಪಾಳೆ ಹೊಡೆಯುವಂತೆ ತಿಳಿಸಿದರು. ಜಾನವಿಗೆ ಒಂದೆಡೆ ಖುಷಿ ಮತ್ತೊಂದೆಡೆ ಭೀತಿ.


ಸಹಜವಾಗಿ ಅವಳ ಮನದ ತುಮುಲವನ್ನು ಕಂಡ ಉಪನ್ಯಾಸಕರು ಅವಳನ್ನು ಪ್ರತ್ಯೇಕವಾಗಿ ಕರೆದು ಧೈರ್ಯ ತುಂಬಿದ್ದರು. ಅವಳ ಅಂತರಾಳದಲ್ಲಿರುವ ಆಲೋಚನೆಗಳಿಗೆ ತಲುಪಿ ಕುಟುಂಬದ ಬಡತನ ಮತ್ತು ರೂಪ ಸೌಂದರ್ಯ ಯಾವತ್ತು ಜ್ಞಾನಕ್ಕೆ ಅಡ್ಡಿಯಾಗದು ಮಗಳೇ, ಜ್ಞಾನ ಎಂಬುದು ಇದೆಲ್ಲವನ್ನೂ ಮೀರಿ ಪಡೆಯುವುದಾಗಿದೆ. ನೀನು ನಿರಂತರ ಶ್ರಮವಹಿಸಿ ಸಾಧನೆಗೈಯುವಂತೆ ತಿಳಿಸಿ ಇಡೀ ತರಗತಿ ಕೋಣೆಯಲ್ಲಿ ಅವಳ ಸಾಧನೆಯನ್ನು ಇನ್ನಿತರರಿಗೆ ಸ್ಫೂರ್ತಿಯಾಗುವಂತೆ ಮೆಚ್ಚಿ ಹೊಗಳಿದರು.

ಒಬ್ಬ ಗುರುವಿನಲ್ಲಿ ಇರಬೇಕಾದ ಮಕ್ಕಳ ಕಾಳಜಿ ಏನೆಂಬುದನ್ನು ಇಲ್ಲಿ ಉಪನ್ಯಾಸಕರು ಮಾಡಿದರು. ಅಲ್ಲದೇ ಬೇರೆ ಮಕ್ಕಳಿಗೂ ಸಾಧನೆ ಪ್ರೇರಣೆಯಾಗಲಿ ಎನ್ನುವಂತೆ ತಿಳಿಹೇಳಿದರು. ಜಾನವಿಯಂತೆ ನಮ್ಮ ಮನಸ್ಸಿನಲ್ಲಿಯೂ ಕೂಡ ಅನೇಕ ದುಗುಡಗಳು ಮನೆ ಮಾಡಿರುತ್ತವೆ. ಆದರೇ ನಿಜಕ್ಕೂ ನಮ್ಮ ಸಾಧನೆಗೆ ಜಾತಿ, ಧರ್ಮ, ರೂಪ ಸೌಂದರ್ಯ, ಕುಟುಂಬದ ಬಡತನ ಎಂದಿಗೂ ಅಡ್ಡಿಯಾಗುವುದಿಲ್ಲ ಎಂಬುದನ್ನು ಅರಿತು ನಡೆಯಬೇಕಿದೆ ಎಂಬುದೇ ಈ ಲೇಖನದ ಮೂಲ ಆಶಯ.

-      - ಬಿಎಂ ಅಮರವಾಡಿ

 


Saturday, July 25, 2020

ಕಲಿವಿನ ಫಲ

ಕಲಿಕೆ ಎಂಬುದು ಸಹಜ ಪ್ರಕ್ರಿಯೆ ಎಂಬ ಮಾತುಗಳು ಎಲ್ಲೆಡೆಯೂ ಕೇಳುತ್ತೆವೆ. ಮನುಷ್ಯ ಹುಟ್ಟಿನಿಂದ ಚಟ್ಟದವರೆಗೂ ಕಲಿಯುತ್ತಲೆ ಅನೇಕ ಹೊಸ ಹೊಸ ಅನುಭವಗಳು ಪಡೆಯುತ್ತಿರುತ್ತಾನೆ. ಹಾಗಾದರೇ ಕಲಿಯುವುದು ಅಷ್ಟೊಂದು ಸುಲಭವೇ? ಎಂಬ ಪ್ರಶ್ನೆ ನಮ್ಮ ಮನದಲ್ಲಿ ಮೂಡಿದಾಗ ನಾವು ಸಹಜವಾಗಿ ಉತ್ತರಿಸಲು ತಡವರಿಸುತ್ತೆವೆ. ಅಂದಂತೆ ಕಲಿಕೆ ಕಲಿಯಕ್ಕಾಗದಷ್ಟು ಹೆಮ್ಮರವಲ್ಲ, ಜೊತೆಗೆ ಹಗುರವಾಗಿ ಸ್ವೀಕರಿಸಿದವರಿಗೆ ಸುಲಭವೂ ಕೂಡ ಅಲ್ಲ ಎಂಬುದು ಹೇಳುವ ಚಿಕ್ಕ ಪ್ರಯತ್ನ ಲೇಖನದಲ್ಲಿ ಮಾಡಿರುವೆ.

ನಾನು ಒಬ್ಬ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕನಾಗಿದ್ದು, ಪ್ರಸ್ತುತ ಬೀದರ್ ಜಿಲ್ಲೆಯ ಗಡಿ ತಾಲೂಕು ಔರಾದನಲ್ಲಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿಯಾಗಿ ಕೆಲಸ ನಿರ್ವಹಿಸುತ್ತಿರುವೆ. ಎಲ್ಲೆಡೆ ಕೋವಿಡ್-19 ಕಾರ್ಮೋಡ ಆವರಿಸಿಕೊಂಡ ಪ್ರಯುಕ್ತ ಶಾಲಾ ಪ್ರಾರಂಭ, ಮಕ್ಕಳ ಕಲಿಕೆ ಸೇರಿದಂತೆ ಹತ್ತಾರು ಪ್ರಶ್ನೆಗಳು ಎನಗೆ ಕಾಡಲಾರಂಭಿಸಿರುವುದಂತೂ ನಿಜ. ಆದರೇ ಮಕ್ಕಳ ಕಲಿಕೆಗೆ ನಾನು ಮಾಡುವುದಾದರೂ ಏನು? ಶಾಲೆಗಳು ಆರಂಭವಾಗದೇ ಮಕ್ಕಳಿಗೆ ಕಲಿಸುವುದಾದರೂ ಹೇಗೆ? ಹೀಗೆ ಹತ್ತಾರು ಪ್ರಶ್ನೆಗಳು ಕಾಡುತ್ತಲಿದ್ದು, ಅವುಗಳ ಪರಿಹಾರಕ್ಕಾಗಿ ಸಮರ್ಪಕ ದಾರಿ ಹುಡುಕಬೇಕಿರುವುದು ಈಗೀನ ಅನಿವಾರ್ಯ ಎಂದು ಭಾವಿಸಿದ್ದೆ.

Educational Websites for Kids - Barkbmamarwadi

ಇದರ ಮಧ್ಯೆದಲ್ಲಿ ಆಯುಕ್ತಾಲಯ, ಸಾರ್ವಜನಿಕ ಶಿಕ್ಷಣ ಇಲಾಖೆ ಕಲಬುರ್ಗಿ ವತಿಯಿಂದ ಒಂದು ಅದ್ಭುತವಾದ ಯೋಜನೆ ಹಾಕಿಕೊಂಡು ಪ್ರತಿ ಶಿಕ್ಷಕರಿಗೂ ನಿರ್ದೀಷ್ಟವಾದ ಟಾಸ್ಕ್  ನೀಡಿ, ಪ್ರತಿಯೊರ್ವ ಶಿಕ್ಷಕ ತನ್ನ ಶಾಲೆಗೆ, ಶಾಲಾ ಮಕ್ಕಳಿಗೆ ತಕ್ಕಂತೆ Student Profile, School Development Plan, Case Study, Book Review, Article on Education, Exposure to the latest e-learning ಹೀಗೆ ಆರು ವಿಷಯಗಳಿಗೆ ಸಂಬಂಧಿಸಿದಂತೆ ಕೆಲಸ ನಿರ್ವಹಿಸುವಂತೆ ತಿಳಿಸಲಾಯಿತು. ಕೆಲಸ ನೀಡಿದ ತಕ್ಷಣ ಅದೆಷ್ಟೋ ಶಿಕ್ಷಕರು ಕೆಲಸದಿಂದ ಬೇಸರವಾಗಿ ನನಗೆ ಕರೆ ಮಾಡಿದ್ದು ಉಂಟು, ಇನ್ನು ಅದೆಷ್ಟೋ ಶಿಕ್ಷಕರು ನೆಪದಲ್ಲಿ ಕನಿಷ್ಟ ಒಂದಿಷ್ಟು ಪುಸ್ತಕಗಳು ಓದಲು ಅವಕಾಶ ದೊರೆತಂತಾಯಿತು ಎಂಬ ಸಮಾಧಾನವು ಕೂಡ ವ್ಯಕ್ತಪಡಿಸಿದ್ದು ಕಂಡೆ.

ಇದಕ್ಕೆ ಪೂರಕವಾಗಿ ಅನೇಕ ಶಿಕ್ಷಕರು ತಮಗೆ ವಹಿಸಿದ ಕೆಲಸಗಳು ಇಷ್ಟದಿಂದಲೋ ಅಥವಾ ಕಷ್ಟದಿಂದಲೋ ಮಾಡಿರುವುದು ಕಂಡು ಬಂತಾದರೂ ಇದರಿಂದ ಶಿಕ್ಷಕರ ಮೂಲ ಕೆಲಸಕ್ಕೆ ಅಣಿಯಾಗಿಸಿ ಪ್ರೇರಣೆ ಜ್ಯೋತಿ ಬೆಳಗಿದ ಇಲಾಖೆಯ ನಡೆ ಅವಿಸ್ಮರಣೀಯ. ಇಷ್ಟಕ್ಕೆ ಮುಗಿತು ಎನ್ನುವಷ್ಟರಲ್ಲಿಯೇ ಶುರುವಾಯ್ತು ಮತ್ತೊಂದು ತಳಮಳ. ಅದೇನಂತಿರಾ? ಕೊರೋನಾ ಮಹಾಮಾರಿಯ ಅಟ್ಟಹಾಸದಿಂದ ಶಾಲಾ ಪ್ರಾರಂಭಕ್ಕೆ ವಿಘ್ನ ಎಂಬ ಸಂದೇಶ.

ಕಳೆದ ಜನವರಿಯಿಂದಲೇ ದೇಶದಲ್ಲಿ ಪ್ರವೇಶಿಸಿದ ಕೊರೋನಾ ನಿಧಾನವಾಗಿ ತನ್ನ ವ್ಯಾಪ್ತಿಯನ್ನು ಹೆಚ್ಚಿಸುತ್ತ ಸಾಗಿರುವುದರಿಂದ ಶಾಲೆಗಳು ಆರಂಭವಾಗಿಲ್ಲದಿರುವುದು ಕಂಡು ಕಲಬುರಗಿ ಆಯುಕ್ತಾಲಯ ಮತ್ತೊಂದು ಸಾಹಸಕ್ಕೆ ಕೈ ಹಾಕಿತ್ತು. ಪ್ರಾರಂಭದಲ್ಲಿ ನಲಿ-ಕಲಿ ಶಿಕ್ಷಕರಿಗಾಗಿ ಆರಂಭಿಸಿದ ವೆಬಿನಾರ್ ತರಬೇತಿ ಇಂದು ಶಿಕ್ಷಕ ಸಮೂಹವನ್ನೇ ಮುನ್ನೆಲೆಗೆ ತಂದಿರುವುದು ಅಕ್ಷರಶಃ ಸತ್ಯವಾದ ಮಾತು.

ಮಾನ್ಯ ಅಪರ ಆಯುಕ್ತರು, ನಿರ್ದೇಶಕರು, ಉಪನಿರ್ದೇಶಕರು(ಯೋಜನೆಸೇರಿದಂತೆ ಹತ್ತಾರು ಅಧಿಕಾರಿ ವರ್ಗದವರು ಸೇರಿಕೊಂಡು ಕರ್ನಾಟಕ ಸೇರಿದಂತೆ ಇನ್ನಿತರ ರಾಜ್ಯದ ಶಿಕ್ಷಣ ವ್ಯವಸ್ಥೆಗೆ ಮಾದರಿ ಎನ್ನುವಂತೆ ಮೇ ಅಂತ್ಯಕ್ಕೆ ಅಂದಾಜು ಕಲಬುರ್ಗಿ ವಿಭಾಗದ ವಿವಿಧ ಜಿಲ್ಲೆಗಳಾದ ಬೀದರ, ಕಲಬುರ್ಗಿ, ಬಳ್ಳಾರಿ, ಯಾದಗಿರಿ, ಕೊಪ್ಪಳ ಮತ್ತು ರಾಯಚೂರಿನ ಸುಮಾರು 22 ಸಾವಿರ ಶಿಕ್ಷಕರಿಗೆ ಇಲಾಖೆ, ಸರ್ಕಾರಕ್ಕೆ ಯಾವುದೇ ರೀತಿಯ ಹೊರೆಯಾಗದೇ ತರಬೇತಿ ನೀಡಲು ಸಾಧ್ಯವಾಗಿರುವುದು ಕೊರೋನಾ ವೈರಾಣುವಿನಿಂದ ಎಂಬುದು ಅಲ್ಲಗಳೆಯುವಂತಿಲ್ಲ.

ಸಂಕಷ್ಟದ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸುತ್ತಲೇ ಪ್ರತಿ ವಿಭಾಗದ (ಕಿರಿಯ, ಹಿರಿಯ ಪ್ರಾಥಮಿಕ, ಪ್ರೌಢ) ಶಿಕ್ಷಕರಿಗೆ ಬೇಕಾದ ಅಗತ್ಯ ಪುನಶ್ಚೇತನ ತರಬೇತಿಗಳು ನೀಡಿರುವುದು, ಪ್ರಸ್ತುತ ನೀಡುತ್ತಲಿರುವುದು ಸಮಯದ ಸದುಪಯೋಗ ಎನ್ನದೇ ಬೇರೆನೂ ಎನ್ನಲಾಗದು. ಸಂದರ್ಭದಲ್ಲಿ ನಾನು ಹತ್ತಾರು ಹೊಸ ಕೆಲಸಗಳು ಕಲಿತು ಮುನ್ನಡೆದಿರುವುದು ನನ್ನ ವೈಯಕ್ತಿಕ ಮತ್ತು ವೃತ್ತಿ ಜೀವನದಲ್ಲಿ ಯಾವತ್ತಿಗೂ ಮರೆಯಕ್ಕಾಗುವುದಿಲ್ಲ.

ವೆಬಿನಾರ್ ತರಬೇತಿಯ ಆಯೋಜನೆ :  

ವೆಬಿನಾರ್ ಎಂಬ ಪದದ ಅರ್ಥವೇ ಗೊತ್ತಿರದ ನನಗೆ ತಾಲೂಕಿನ ಎಲ್ಲ ಶಿಕ್ಷಕರಿಗೆ ತರಬೇತಿಯ ಆಯೋಜನೆಗೆ ಅಣಿಯಾಗುವಂತೆ ಮೇಲಾಧಿಕಾರಿಗಳು ಸೂಚಿಸಿದಾಗ ಇದೆನಪ್ಪ ಮಾಡುವುದು ಅಂತ ಭಯದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದೆ. ಆದರೆ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಎಚ್.ಟಿ ಮಂಜುನಾಥ ಸರ್ ಮತ್ತು ಕ್ಷೇತ್ರ ಸಮನ್ವಯಾಧಿಕಾರಿ ಶ್ರೀ ಸಂತೋಷಕುಮಾರ ಪೂಜಾರಿ ಅವರ ಧನಾತ್ಮಕ ಪ್ರೋತ್ಸಾಹದಿಂದ ಮೊದಲ ತರಬೇತಿ ಮಾಡಿ ಮುಗಿಸಿದೆ.

ಅಷ್ಟೋತ್ತಿಗೆ ಲಿಂಕ್ ಮೂಲಕ ತರಬೇತಿಯಲ್ಲಿ ಭಾಗವಹಿಸುವ ಮತ್ತು ಕೆಲ ಆನ್ಲೈನ್ ಸಭೆಗಳಿಗಾಗಿ ಬಳಸುವ ಆ್ಯಪ್ ಗಳ ಬಗ್ಗೆ ಮಾಹಿತಿ ದೊರೆಯಿತು. ಮುಂದುವರೆದು ಕೆಲವು ತರಬೇತಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ ಮಾಡಿರುವ ಹಿನ್ನೆಲೆ ಹೊಸ ವಿಷಯಗಳ ಬಗ್ಗೆ ಮಾಹಿತಿ ಪಡೆಯಲು ಸಾಧ್ಯವಾಯಿತು.

Here's why providing school education is not enough for your kids ...

ಶಾಲಾ ಅಭಿವೃದ್ಧಿ, ಮಕ್ಕಳ ಪ್ರಗತಿ ಸೇರಿದಂತೆ ಶಾಲೆಯ ಅನೇಕ ಕೆಲಸ ಕಾರ್ಯಗಳಿಗೆ ಇದು ಬಹು ಉಪಯೋಗಕಾರಿ. ಈ ಆ್ಯಪ್ ಮೂಲಕ ಶಾಲೆಯ ಮಕ್ಕಳ ಪಾಲಕ ಪೋಷಕರಿಗೆ ಪ್ರತಿ ತಿಂಗಳು ಸಭೆ ಕರೆದು ಮಕ್ಕಳ ಪ್ರಗತಿ ಮತ್ತು ಶಾಲಾ ಅಭಿವೃದ್ಧಿಯಲ್ಲಿ ಸಮುದಾಯದ ಪಾಲ್ಗೊಳ್ಳುವಿಕೆಯನ್ನು ಸಮರ್ಥವಾಗಿ ಮಾಡಬಹುದೆಂಬುದನ್ನು ಅರಿತುಕೊಂಡೆ.

ನನ್ನ ವೈಯಕ್ತಿಕ ಜೀವನಕ್ಕೂ ಕೂಡ ತುಂಬ ಅನುಕೂಲವಾಗುವ ಈ ಆ್ಯಪ್ ಹೇಗೆ ಬಳಸಬೇಕು? ಎಂಬುದನ್ನು ಅಜೀಂ ಪ್ರೇಮ್ ಜೀ ಫೌಂಡೇಶನ್ ತಾಲೂಕು ಸಮನ್ವಯಾಧಿಕಾರಿ ಡಾ. ಶಿವಾಜಿ ಬಿರಾದಾರ್ ಅವರಿಂದ ತಿಳಿದುಕೊಂಡೆ. ಕೇವಲ ರಾಜ್ಯವಲ್ಲದೇ ಹೊರ ರಾಜ್ಯದ ರಾಜ್ಯ ಸಂಪನ್ಮೂಲ ವ್ಯಕ್ತಿಗಳಿಗೆ (SRP) ಅವರಿಗೂ ಕೂಡ ತಾಲೂಕು ಮಟ್ಟದ ತರಬೇತಿಯಲ್ಲಿ ಪಾಲ್ಗೊಳ್ಳಲು ಆಹ್ವಾನಿಸಿ ಅವರಿಂದ ನಮ್ಮ ತಾಲೂಕಿನ ಶಿಕ್ಷಕರಿಗೆ ಬೋಧನೆಗೆ ಅನುಕೂಲವಾಗುವ ಅನೇಕ ವಿಚಾರಗಳು ಕೂಡ ಹಂಚಿಕೊಳ್ಳಲು ವಿನಂತಿಸಿದೆ. ಇದರಲ್ಲಿ ನಮ್ಮ ತಾಲೂಕಿನ ತೋರಣಾ ಸಮೂಹ ಸಂಪನ್ಮೂಲ ವ್ಯಕ್ತಿ ರೋಹಿದಾಸ ಮೇತ್ರೆ ಅವರ ಪಾತ್ರ ಮಹತ್ವದ್ದಾಗಿದೆ. ಪ್ರಸ್ತುತ ಕೋವಿಡ್-19 ಆವರಿಸಿಕೊಂಡ ಹಿನ್ನೆಲೆ ತಾಲೂಕಿನ ಶೈಕ್ಷಣಿಕ ಚಟುವಟಿಕೆಗಳು ನಿರಂತರವಾಗಿ ನಡೆಯುವಂತೆ ಸಭೆಗಳು ಕೂಡ ಮಾಡುವಂತಿಲ್ಲ. ಅದಕ್ಕೂ ಕೂಡ ತುಂಬ ಲಾಭದಾಯಕವಾಗಿದೆ.

GOOGLE FORM ನ ಬಳಕೆ :

Google ಖಾತೆ ಹೊರತುಪಡಿಸಿ ಬೇರೆನೂ ಗೊತ್ತಿರದ ನನಗೆ ಈ ಸಂದರ್ಭದಲ್ಲಿ Google Forms ಯಾವ ರೀತಿ ಬಳಕೆಯಾಗುತ್ತದೆ ಎಂಬುದನ್ನು ಅರಿತು, ಪ್ರತಿಯೊಂದು ಮಾಹಿತಿಯನ್ನು ಕ್ಷಣಾರ್ಧದಲ್ಲಿ ಪಡೆಯುಲು ಸಾಧ್ಯವಾಗುತ್ತಿದೆ. ಅಲ್ಲದೇ ತರಬೇತಿ ನಿರತ ಶಿಕ್ಷಕರಿಗೆ MCQ ಮಾದರಿ ಪ್ರಶ್ನಾವಳಿಗಳು ರಚಿಸಿ ಪರೀಕ್ಷೆ ಕೈಗೊಳ್ಳಲು ಸಹಾಯವಾಗಿದೆ.

ಮುಂಬರುವ ಈ ಕೋವಿಡ್-19 ನಂತಹ ಭಯಾನಕ ದಿನಗಳಲ್ಲಿ ಮಕ್ಕಳಿಗೆ ಮನೆಯಿಂದಲೇ ಪರೀಕ್ಷೆಯಲ್ಲಿ ಪಾಲ್ಗೊಂಡು ಜ್ಞಾನವನ್ನು ಸಂರಚಿಸಿಕೊಳ್ಳಲು ಸಾಧ್ಯವಾಗಿಸಬಹುದು. ಅಲ್ಲದೇ ವೈಯಕ್ತಿಕವಾಗಿಯೂ ಕೂಡ ಬಳಕೆಗೆ ಬಳಸಬಹುದು ಎಂಬುದನ್ನು ಅರಿತುಕೊಂಡೆ.

ಅಲ್ಲದೇ, Whatsapp ಮೂಲಕ ಏಕಕಾಲಕ್ಕೆ ಹಲವರಿಗೆ ಸಂದೇಶಗಳು ಕಳುಹಿಸುವುದು ಹೇಗೆ?, ಹಿಂದಿ TYPEWRITING ಮಾಡುವುದು ಹೇಗೆ?, Blogger ನ ಬಳಕೆ ಮಾಡುವುದು ಹೇಗೆ?, YOUTUBE ಖಾತೆ ಬಳಸಿಕೊಳ್ಳುವುದು ಹೇಗೆ?, ಕಲಿಕೆಗೆ ಪೂರಕವಾದ ವಿಡಿಯೋ ಮತ್ತು ಆಡಿಯೋ ಮಾಡುವುದು ಹೇಗೆ?, ಕಲಿಕೋಪಕರಣಗಳು, ಪಾಠೋಪಕರಣಗಳು ತಯಾರಿಸುವುದು ಹೇಗೆ? ಹೀಗೆ ಹತ್ತಾರು ಹೊಸ ಹೊಸ ವಿಷಯಗಳು ಅರಿತು ಮುನ್ನಡೆಯಲು ತುಂಬ ಖುಷಿಯಾಗುತ್ತಿದೆ.

HRD ministry recommends using government educational portals ...

ಒಟ್ಟಾರೆ ಕೋವಿಡ್-19 ಮಾಹಾಮಾರಿ ಆವರಿಸಿಕೊಂಡ ಈ ಸಂದರ್ಭದಲ್ಲಿ ವಿಪುಲ ಅವಕಾಶಗಳು ನೀಡುವ ಮೂಲಕ ನನ್ನ ವೃತ್ತಿನೈಪುಣ್ಯತೆ ಹೆಚ್ಚಿಸಿಕೊಳ್ಳಲು ಅವಕಾಶ ಒದಗಿಸಿದ ಕಲಬುರ್ಗಿ ವಿಭಾಗದ ಮಾನ್ಯ ಆಯುಕ್ತರು, ನಿರ್ದೇಶಕರು, ಉಪನಿರ್ದೇಶಕರು (ಯೋಜನೆ), ಉಪನಿರ್ದೇಶಕರು (ಆಡಳಿತ), ಬೀದರ, ಡಯಟ ಪ್ರಾಂಶುಪಾಲರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕ್ಷೇತ್ರ ಸಮನ್ವಯಾಧಿಕಾರಿಗಳು ಸೇರಿದಂತೆ ಹಿರಿಯ ಅಧಿಕಾರಿ ವರ್ಗದವರಿಗೂ, CRP, BRP, ECO ಮತ್ತು ಶಿಕ್ಷಕ ಬಾಂಧವರಿಗೆ ಅನಂತಾನಂತ ಧನ್ಯವಾದಗಳು.

-                    - ಬಿಎಂ ಅಮರವಾಡಿ


ಅಂಧಂತಮಸು ಇನ್ನಾರಿಗೆ : ಕನಕದಾಸರ ಕೀರ್ತನೆ ವಿಶ್ಲೇಷಣೆ

  ಅಂಧಂತಮಸು ಇನ್ನಾರಿಗೆ ಅಂಧಂತಮಸು ಇನ್ನಾರಿಗೆ ಗೋ - ವಿಂದನ ನಿಂದಿಸುವರಿಗೆ ಸಂದೇಹವಿಲ್ಲದೆ ಸಾರಿಸಾರಿಗೆ ವಾಯುನಂದನನ ವಂದಿಸದವರಿಗೆ ಮಾತುಮಾತಿಗೆ ಹರಿಯ ನ...